Advertisement

ಸರ್ಕಾರಕ್ಕೆ ತರಾಟೆ; ಅಧಿಕಾರಿಗಳಿಗೆ ಬೆವರಿಳಿಸಿದ ಹೈಕೋರ್ಟ್‌

02:03 PM Nov 09, 2021 | Team Udayavani |

ಬೆಂಗಳೂರು: ಕೋರ್ಟ್‌ ಆದೇಶಗಳನ್ನು ಪಾಲನೆ ಮಾಡದ ಮತ್ತು ಖುದ್ದು ವಿಚಾರಣೆಗೆ ಹಾಜರಾಗಬೇಕೆಂದು ನಿರ್ದೇಶನ ಇದ್ದಾಗ ಅಧಿಕಾರಿಗಳು ನಿರ್ಲಕ್ಷ್ಯ ತೋರುವುದಕ್ಕೆ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ಇಂತಹ ದುರ್ವರ್ತನೆ ಪ್ರದರ್ಶಿಸುವ ಅಧಿಕಾರಿಗಳಿಗೆ ಹೈಕೋರ್ಟ್‌ ಅಂದರೇನು? ಕೋರ್ಟ್‌ ಆದೇಶಗಳೆಂದರೇನೆಂದು ಚೆನ್ನಾಗಿ ತೋರಿಸಿಕೊಡಬೇಕಾಗುತ್ತದೆ ಎಚ್ಚರಿಕೆ ನೀಡಿದೆ.

Advertisement

“ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್‌)ಗೆ ವೈದ್ಯಕೀಯ ಅಧೀಕ್ಷರನ್ನು ನೇಮಕ ಮಾಡುವ ಮತ್ತು ಎಂಆರ್‌ಐ ಮಷಿನ್‌ ಒದಗಿಸುವ ಅದೇ ರೀತಿ 2022ರೊಳಗೆ “ಹೌಸಿಂಗ್‌ ಫಾರ್‌ ಆಲ್‌’ ಘೋಷಣೆಯಡಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಗ್ರಾಮೀಣ ಮತ್ತು ನಗರ ಭಾಗದ ವಸತಿರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಕೋರಿ ಸಲ್ಲಿಸಲಾಗಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಇವರಿಬ್ಬರು ಕೋರ್ಟ್‌ಗೆ ಖುದ್ದು ಹಾಜರಾಗಬೇಕಿತ್ತು. ಸೋಮವಾರ ಕಲಾಪ ಆರಂಭವಾಗಿ ಡಿಮ್ಹಾನ್ಸ್‌ ಗೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಬಂದಾಗ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಚಿವ ಸಂಪುಟ ಸಭೆಗೆ ಹಾಜರಾಗಲು ತೆರಳಿದ್ದಾರೆ. ಹಾಗಾಗಿ ಕೋರ್ಟ್‌ಗೆ ಹಾಜರಾಗಿಲ್ಲ ಎಂದು ಸರ್ಕಾರಿ ವಕೀಲರು ಹೇಳಿದರು.

ಇದರಿಂದ ಕೆರಳಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ಅಧಿಕಾರಿಗೆ ಕೋರ್ಟ್‌ಗಿಂತ ಕ್ಯಾಬಿನೇಟ್‌ ಮೀಟಿಂಗ್‌ ಮುಖ್ಯ ಆಯಿತಾ. ಅವರಿಗೆ ಅಲ್ಲಿಗೆ ಹೋಗಲು ಹೇಳಿದ್ದು ಯಾರು? ಕೋರ್ಟ್‌ ಆದೇಶ ಪಾಲನೆ ಮಾಡಲ್ಲ, ಖುದ್ದು ಹಾಜರು ಆಗುವುದಿಲ್ಲ. ಇದನ್ನು ನೋಡಿ ಸುಮ್ಮನೆ ಇರಲು ಸಾಧ್ಯವಿಲ್ಲ. ಇಂತಹ ನಡವಳಿಕೆಯನ್ನು ನಾನು ಎಲ್ಲೂ ಕಂಡಿಲ್ಲ. ಕೋರ್ಟ್‌ಗೆ ಬರಲು ಹೇಳಿ, ಇಲ್ಲ ಅಂದರೆ ಪೊಲೀಸರಿಗೆ ಹೇಳಿ ಬಂಧಿಸಿ ಕರೆತರುವಂತೆ ನಿರ್ದೇಶನ ನೀಡಲಾಗುವುದು ಎಂದರು.

ಕೆಲ ಹೊತ್ತಿನ ಬಳಿಕ ವಸತಿರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಕೋರಿದ್ದ ಅರ್ಜಿ ವಿಚಾರಣೆಗೆ ಬಂದಾಗಲೂ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಬಂದಿಲ್ಲ. ಸ್ವಲ್ಪ ಕಾಲಾವಕಾಶಬೇಕು ಎಂದು ಸರ್ಕಾರಿ ವಕೀಲರು ಕೋರಿದರು. ಮತ್ತೇ ಸಿಟ್ಟಾದ ಮುಖ್ಯ ನ್ಯಾಯಮೂರ್ತಿ ಮಧ್ಯಾಹ್ನ 2.30ಕ್ಕೆ ಇಬ್ಬರೂ ಅಧಿಕಾರಿಗಳು ಹಾಜರಿರಬೇಕು. ಅಲ್ಲದೇ ವಿವರಣೆ ನೀಡಲು ಅಡ್ವೋಕೇಟ್‌ ಜನರಲ್‌ ಅವರಿಗೂ ಬುಲಾವ್‌ ನೀಡಿದರು. ಮಧ್ಯಾಹ್ನ ಕಲಾಪ ಆರಂಭವಾದಾಗ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ ಹಾಜರಾಗಿ ನ್ಯಾಯಾಲಯದ ಕ್ಷಮೆ ಕೇಳಿದರು. ಅಲ್ಲದೇ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗುವುದು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸುತ್ತೋಲೆ ಹೊರಡಿಸಿ: ಕೋರ್ಟ್‌ ಚಾಟಿ ಬೀಸಿದ ಬಳಿಕ ವಿಚಾರಣೆಗೆ ಹಾಜರಾಗಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌ ಹಾಗೂ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ರವಿಶಂಕರ್‌ ಅವರಿಗೆ ಬೆವರಿಳಿಸಿದ ಮುಖ್ಯ ನ್ಯಾಯಮೂರ್ತಿಗಳು, ನಾನು ಬರೆಯವ ಒಂದು ಪದ ನಿಮ್ಮ ವೃತ್ತಿ ಜೀವನ ಹಾಳು ಆಗುತ್ತದೆ. ಮುಂದೆ ಈ ರೀತಿ ನಡೆದುಕೊಳ್ಳಬೇಡಿ ಎಂದು ತಾಕೀತು ಮಾಡಿದರು. ಅಲ್ಲದೇ ನ್ಯಾಯಾಲಯದ ಆದೇಶ ಇದ್ದಾಗ ಎಂತಹದ್ದೇ ತುರ್ತು ಇದ್ದರೂ ವಿಚಾರಣೆಗೆ ಹಾಜರಾಗಲು ಅಧಿಕಾರಿಗಳಿಗೆ ತಾಕೀತು ಮಾಡಿ ಸುತ್ತೋಲೆ ಹೊರಡಿಸಿ ಎಂದು ಅಡ್ವೋಕೇಟ್‌ ಜನರಲ್‌ ಅವರಿಗೆ ಸೂಚಿಸಿದರು. ತಕ್ಷಣ ಮುಖ್ಯ ಕಾರ್ಯದರ್ಶಿ ಯವರಿಂದ ಸುತ್ತೋಲೆ ಹೊರಡಿಸಲಾಗು ವುದು ಎಂದು ಅಡ್ವೋಕೇಟ್‌ ಜನರಲ್‌ ನ್ಯಾಯಾಲಯಕ್ಕೆ ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next