ಪುಂಜಾಲಕಟ್ಟೆ: ಶ್ರೀಕ್ಷೇತ್ರ ಧ.ಗ್ರಾ. ಯೋಜನೆಯ ಬಂಟ್ವಾಳ ತಾಲೂಕು ಅಲ್ಲಿಪಾದೆ ಕಾರ್ಯಕ್ಷೇತ್ರದ ಯೋಜನೆಯ ಬಿ.ಸಿ. ಟ್ರಸ್ಟ್ ವತಿಯಿಂದ ಯಾಂತ್ರೀಕೃತ ಭತ್ತ ನಾಟಿ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಬೀಯಪಾದೆ ನೋಣಯ್ಯ ಪೂಜಾರಿ ಗದ್ದೆಯಲ್ಲಿ ಜರಗಿತು.
ಕೃಷಿ ಯಂತ್ರೋಪಕರಣ ಬಾಡಿಗೆ ಸೇವಾ ಕೇಂದ್ರ ಉಡುಪಿ ವಿಭಾಗ ಸಮನ್ವಯಾ ಧಿಕಾರಿ ಅಶೋಕ್ ಮಾತನಾಡಿ, ಯಾಂತ್ರೀ ಕೃತ ಭತ್ತ ನಾಟಿಯಿಂದ ಕೂಲಿ ಆಳುಗಳ ಸಮಸ್ಯೆ ನೀಗಿಸಲಾಗಿದ್ದು, ಕಡಿಮೆ ಖರ್ಚಿ ನಲ್ಲಿ ಹೆಚ್ಚು ಇಳುವರಿ ಪಡೆಯಲು ಇದರಿಂದ ಸಾಧ್ಯ. ಬಾಡಿಗೆ ಕೇಂದ್ರದಲ್ಲಿ ರೈತರಿಗೆ ಬೇಕಾದ ಯಂತ್ರೋಪಕರಣ ಕಡಿಮೆ ಬಾಡಿಗೆಯಲ್ಲಿ ಒಬ್ಬ ಯಂತ್ರದ ನಿರ್ವಾಹಕನ ಸಹಿತ ಒದಗಿಸಲಾಗುವುದು ಎಂದರು. ಕೃಷಿ ಮಾಡದೆ ಗದ್ದೆಯನ್ನು ಹಡೀಲು ಬಿಡಬಾರದು. ಮುಂದಕ್ಕೆ ಯಂತ್ರೋಪಕರಣ ಬಳಸುವಂತೆ ಮನವಿ ಮಾಡಿದರು.
ಯೋಜನೆಯ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದ ಪಿ. ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ, ಇಲಾಖೆಯ ಹಲವು ಕಾರ್ಯಕ್ರಮಗಳು, ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿಕರಿಗೆ ಸಿಗುವ ಸೌಲಭ್ಯ-ಸಹಾಯಧನ, ಯಾಂತ್ರೀಕರಣ ಭತ್ತ ಬೇಸಾಯದ ಬಗ್ಗೆ ಕೃಷಿಕ ಫಲಾನುಭವಿಗಳಿಗೆ ಮಾಹಿತಿ ನೀಡಿದರು. ತಿಲಕ್ ಶಾಂತಿ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ಒಕ್ಕೂಟದ ವಲಯಾಧ್ಯಕ್ಷ ವಸಂತ ಮೂಲ್ಯ ಶುಭ ಹಾರೈಸಿದರು. ಈ ಸಂದರ್ಭ ವಲಯದ ಒಕ್ಕೂಟದ ಅಧ್ಯಕ್ಷರು, ಬೀಯಪಾದೆ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಗೆಳೆಯರ ಬಳಗದ ಪದಾಧಿಕಾರಿ ಲೋಕೇಶ್, ಸರಪಾಡಿ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಸಿ.ಎಚ್.ಎಸ್.ಸಿ ಕೇಂದ್ರದ ಮ್ಯಾನೇಜರ್ ಸಂದೇಶ್, ಸೇವಾಪ್ರತಿನಿಧಿಗಳಾದ ಉಷಾ, ವಿಜಯಾ, ವಸಂತಿ ಉಪಸ್ಥಿತರಿದ್ದರು.
ಯೋಜನೆಯ ತಾ| ಕೃಷಿ ಮೇಲ್ವಿಚಾರಕ ಜನಾರ್ದನ ಸ್ವಾಗತಿಸಿದರು. ಬಂಟ್ವಾಳ ವಲಯದ ಮೇಲ್ವಿಚಾರಕಿ ಅಶ್ವಿನಿ ನಿರೂಪಿಸಿದರು. ತಾಲೂಕಿನ ನಿಕಟಪೂರ್ವ ಒಕ್ಕೂಟ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ವಂದಿಸಿದರು.