Advertisement

ಬೃಹತ್‌ ವೃಕ್ಷ ನಾಶಕ್ಕೆ ದಶಕ: ಬದಲಿ ಸಸ್ಯಾರೋಪಣವಿನ್ನೂ ಅಪೂರ್ಣ

09:56 AM Jun 24, 2019 | keerthan |

ಉಡುಪಿ: ತಲಪಾಡಿಯಿಂದ ನಂತೂರು, ಸುರತ್ಕಲ್‌ನಿಂದ ಕುಂದಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ 66 ಅಗಲಗೊಳ್ಳುವ ಪ್ರಕ್ರಿಯೆ ಆರಂಭವಾಗಿ ಹತ್ತು ವರ್ಷಗಳಾಗಿವೆ. ಭೂಸ್ವಾಧೀನದ ಬಳಿಕ ನಡೆದ ಮೊದಲ ಕೆಲಸವೇ ನೂರಾರು ವರ್ಷ ವಯಸ್ಸಿನ ಸಾವಿರಾರು ಬೃಹತ್‌ ಮರಗಳನ್ನು ಕಡಿದುರುಳಿಸಿದ್ದು. ಈ ವೃಕ್ಷ ಸಂಹಾರಕ್ಕೆ ಈಗ ದಶಮಾನೋತ್ಸವ. ಆದರೆ ಬದಲಿ ಗಿಡ ನೆಟ್ಟು ಬೆಳೆಸುವ ಷರತ್ತು ಇನ್ನೂ ಕಾರ್ಯಗತಗೊಂಡಿಲ್ಲ.

Advertisement

ರಾಷ್ಟ್ರೀಯ ಹೆದ್ದಾರಿಯನ್ನು ಗುತ್ತಿಗೆ ವಹಿಸಿ ಕೊಡುವಾಗ ನವಯುಗ ಕನ್‌ಸ್ಟ್ರಕ್ಷನ್‌ ಕಂಪೆನಿಗೆ ಹಾಕಿದ ಷರತ್ತುಗಳಲ್ಲಿ ಒಂದು ಕಡಿದ ಮರಗಳಿಗೆ ಮೂರು ಪಟ್ಟು ಸಸಿಗಳನ್ನು ನೆಡಬೇಕು ಎನ್ನುವುದು. ವಾಸ್ತವದಲ್ಲಿ ಕಡಿದ ಮರಗಳ ಪ್ರಮಾಣಕ್ಕೆ ಹಾಕಿದ ಮೂರು ಪಟ್ಟು ಗಿಡಗಳ ನೆಡುವಿಕೆಯ ಷರತ್ತೇ ಅವೈಜ್ಞಾನಿಕ. ಅಷ್ಟಾದರೂ ಆಗಿಲ್ಲ.

ಒಟ್ಟು 90 ಕಿ.ಮೀ. ಉದ್ದದ ಈ ರಸ್ತೆಯ ಪಕ್ಕ ಬೆಳೆದಿದ್ದ 18,400 ಮರಗಳನ್ನು ಕಡಿಯಲಾಗಿದೆ. ಷರತ್ತಿನ ಪ್ರಕಾರ 54,000 ಸಸಿಗಳನ್ನು ನೆಡಬೇಕಾ
ಗಿತ್ತು. ಒಂದು ಮೂಲದ ಪ್ರಕಾರ 42,700 ಸಸಿಗಳನ್ನು ನೆಡಲಾಗಿದೆ; ಅವುಗಳಲ್ಲಿ ಅರ್ಧಾಂಶ ಮಾತ್ರ ಬದುಕುಳಿದಿವೆ. ಉಳಿದುದನ್ನು ನೆಟ್ಟೇ ಇಲ್ಲ. ಈಗ ಈ ರಸ್ತೆಯಲ್ಲಿ ವಿಭಾಜಕದ ನಡುವೆ ಇರುವ ಹೂವಿನ ಗಿಡಗಳು ಬೃಹತ್‌ ಮರಗಳಿಗೆ ಪರ್ಯಾಯವಾಗಿ ನೆಡಬೇಕಾದ ಸಸಿಗಳ ಲೆಕ್ಕದಲ್ಲಿ ಬರುವುದಿಲ್ಲ. ಅವು ಕೇವಲ “ಲೈಟ್‌ ಬ್ಯಾರಿಯರ್‌’. ಅವೂ ಸರಿಯಾದ ಉಪಚಾರವಿಲ್ಲದೆ ಸಾಯುತ್ತಿವೆ. ಇವನ್ನೂ ಎಲ್ಲ ಕಡೆ ನೆಟ್ಟಿಲ್ಲ ಎಂಬ ಆರೋಪವಿದೆ.

ಬೃಹತ್‌ ಮರಗಳ ಬದಲಿಗೆ ಸಸಿಗಳನ್ನು ನೆಡಬೇಕಾದದ್ದು ರಸ್ತೆಯ ಇಕ್ಕೆಲಗಳಲ್ಲಿ. ಈ ಗಿಡಗಳನ್ನು ನೆಡದಿರುವುದಕ್ಕೆ ಸ್ಥಳಾಭಾವ ಕಾರಣವಲ್ಲ; ಪ್ರಬಲ ಇಚ್ಛಾಶಕ್ತಿಯ ಕೊರತೆ.  ವೃಕ್ಷ ಸಂಹಾರದ ಹತ್ತನೆಯ ವರ್ಷದಲ್ಲೀಗ ನೆಡಲು 11,000 ಗಿಡಗಳನ್ನು ರಸ್ತೆ ನಿರ್ಮಾಣ ಕಂಪೆನಿಯವರು ತರಿಸಿಕೊಂಡಿದ್ದಾರೆ. ಎಲ್ಲೆಲ್ಲಿ ಸತ್ತು ಹೋಗಿದೆಯೋ ಅಲ್ಲಿ ಮತ್ತು ಹೊಸದಾಗಿ ನೆಡಲು ತಯಾರಿ ನಡೆಸಲಾಗಿದೆ. ಜೂ. 23ರಂದು ಸಸಿ ನೆಡುವ ಕೆಲಸ ಆರಂಭ ಎಂದು ರಾ.ಹೆ. ಪ್ರಾಧಿಕಾರದ ಸಲಹೆಗಾರ ಎಂಜಿನಿಯರ್‌ ಬಾಲಚಂದರ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ನೆಟ್ಟು ಸತ್ತು ಹೋದ ಸ್ಥಳಗಳಲ್ಲಿ ಮತ್ತು ಹೊಸ ಜಾಗದಲ್ಲಿ ನೆಡಲು ಸಸಿಗಳನ್ನು ಖರೀದಿಸಲಾಗಿದೆ. ಈಗ ಮಳೆಗಾಲ ಆರಂಭವಾಗಿರುವುದರಿಂದ ಆದಷ್ಟು ಶೀಘ್ರ ಒಪ್ಪಂದದ ಪ್ರಕಾರ ಪೂರ್ಣಪ್ರಮಾಣದಲ್ಲಿ ಗಿಡಗಳನ್ನು ನೆಡಲು ರಸ್ತೆ ನಿರ್ಮಾಣ ಕಂಪೆನಿಗೆ ತಿಳಿಸಿದ್ದೇವೆ.
ಬಾಲಚಂದರ್‌, ಸಲಹೆಗಾರ ಎಂಜಿನಿಯರ್‌, ರಾ.ಹೆ. ಪ್ರಾಧಿಕಾರ, ಮಂಗಳೂರು

Advertisement

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next