ಬದಿಯಡ್ಕ : ಜನತೆಯಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಜಿಲ್ಲೆಯ ಹೆದ್ದಾರಿ ಬದಿಗಳು ತ್ಯಾಜ್ಯ ರಹಿತವಾಗಿ ಶುಚಿಯಾಗಿದೆ. ಜಿಲ್ಲಾಡಳಿತ ನೇತೃತ್ವದಲ್ಲಿ ನಡೆಸಲಾದ ತೀವ್ರ ಶುಚೀಕರಣ ಯಜ್ಞದ ಪರಿಣಾಮ ಹೆದ್ದಾರಿಯಲ್ಲಿ ಶುದ್ಧಗಾಳಿ ಸೇವಿಸುತ್ತಾ ಪ್ರಯಾಣ ಮಾಡಬಹುದಾದ ಅವಕಾಶ ಲಭಿಸಿದೆ. ಆರೋಗ್ಯ ಜಾಗೃತಿಯ ಅಂಗವಾಗಿ ಸ್ಥಳೀಯಾಡಳಿತ ಸಂಸ್ಥೆಗಳ ಸಹಿತ ವಿವಿಧ ಸಂಘಟನೆಗಳ ಸಹಭಾಗಿತ್ವದೊಂದಿಗೆ ಜಿಲ್ಲಾಡಳಿತ ತ್ವರಿತಗತಿಯಲ್ಲಿ ಶುಚೀಕರಣ ಯಜ್ಞ ನಡೆಸಿದೆ.
ವಿದ್ಯಾರ್ಥಿ ಪೋಲೀಸ್ ಕೆಡೆಟಗಳು, ರಾಷ್ಟ್ರೀಯ ಸೇವಾ ಯೋಜನೆ, ಕುಟುಂಬಶ್ರೀ, ರೆಸಿಡೆನ್ಸ್ ಅಸೋಸಿಯೇಶನ್, ಉದ್ಯೋಗ ಖಾತರಿ ಯೋಜನೆ, ಯೂತ್ ಕ್ಲಬ್, ಹರಿತ ಕ್ರಿಯಾ ಸೇನೆ ಸಹಿತ ಸಂಘಟನೆಗಳ ಕಾರ್ಯಕರ್ತರು ಶುಚೀಕರಣ ನಡೆಸಿದರು. ಜಿಲ್ಲೆಯಾದ್ಯಂತ ಶುಚೀಕರಣ ನಡೆದಿದ್ದು, 229.8 ಕಿಮೀ ಉದ್ದ ಹೆದ್ದಾರಿ ಬದಿ ತ್ಯಾಜ್ಯ ತೆರವು ನಡೆಸಲಾಗಿದೆ. 76.8 ಕಿಮೀ ರಾಷ್ಟ್ರೀಯ ಹೆದ್ದಾರಿ, 29 ಕಿಮೀ ಕೆ.ಎಸ್.ಟಿ.ಪಿ. ರಸ್ತೆ, 33 ಕಿಮೀ ರಾಜ್ಯ ಹೆದ್ದಾರಿ, 91 ಕಿಮೀ ಜಿಲ್ಲೆಯ ಪ್ರಧಾನ ರಸ್ತೆಗಳ ಬದಿಗಳಲ್ಲಿ ಈ ಶುಚೀಕರಣ ನಡೆಸಲಾಗಿದೆ.
ತಲಪ್ಪಾಡಿಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಕಾಸರಗೋಡಿನಲ್ಲಿ ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು, ಕಾಲಿಕಡವಿನಲ್ಲಿ ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಶುಚೀಕರಣ ನಡೆಸಿದವರಿಗೆ ಮಾಸ್ಕ್, ಗ್ಲೌಸ್, ಗೋಣಿಚೀಲ ಇತ್ಯಾದಿ ಶುಚಿತ್ವ ಮಿಷನ್ ಜಿಲ್ಲಾ ಘಟಕ ಒದಗಿಸಿತ್ತು. ಇವರ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಕ್ರಿಯವಾಗಿತ್ತು. ಸಂಗ್ರಹಿಸಲಾದ ತ್ಯಾಜ್ಯಗಳನ್ನು ಚೀಮೇನಿಯ ತೋಟಗಾರಿಕೆ ನಿಗಮ, ಪಿಲಿಕೋಡ್ ವಲಯ ಕೃಷಿ ಸಂಶೋಧನಾಕೇಂದ್ರ, ಸೀತಾಂಗೋಳಿ ಕಿನ್ಫ್ರಾ ಸಮೀಪದ ಸರಕಾರಿ ಜಾಗಗಳಲ್ಲಿ ಇರಿಸಲಾಗಿದ್ದು, ಶೀಘ್ರದಲ್ಲಿ ಪರಿಷ್ಕರಣೆ ನಡೆಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದರು.
ತಲಪ್ಪಾಡಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಸ್ವಯಂ ಹೊಣೆಗಾರಿಕೆಯಾಗಿರುವ ತ್ಯಾಜ್ಯ ತೆರವುಗೊಳಿಸುವುದು ಮಹತ್ತರ ಪುಣ್ಯ ಕಾರ್ಯ. ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ತಂದು ಸುರಿಯುವುದು ಪ್ರಕೃತಿಗೆ ನಡೆಸುವ ಮಹಾಪಾತಕ ಎಂದರು. ಯಾರೋ ನಡೆಸುವ ಇಂಥಾ ಅಪರಾಧಗಳಿಂದ ಹಾದಿಬದಿ ಕಲುಷಿತ ವಾಗುವುದರಿಂದ ಪರಿಸರ ಮಾಲಿನ್ಯವೂ ಜೊತೆಗೆ ಆರೋಗ್ಯ ಸಮಸ್ಯೆಯೂ ನಿರ್ಮಾಣವಾಗುತ್ತದೆ. ಇದರ ನಿವಾರಣೆಗೆ ಸಾರ್ವಜನಿಕರ ಸತತ ಬೆಂಬಲ ಬೇಕು ಎಂದರು.
ಶುಚಿತ್ವ ಮಿಷನ್ ಜಿಲ್ಲಾ ಸಂಚಾಲಕ ಸಿ.ರಾಧಾಕೃಷ್ಣನ್, ಕಾರ್ಯಕ್ರಮಾಧಿಕಾರಿ ಕೆ.ವಿ.ರಂಜಿತ್, ಹಸಿರು ಕೇರಳ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಹಣಕಾಸು ಅಧಿಕಾರಿ ಕೆ.ಸತೀಶನ್, ಕಾಸರಗೋಡು ತಹಸೀಲ್ದಾರ್ ಸಾಹುಲ್ ಹಮೀದ್, ಕ್ಲೀನ್ ಕೇರಳ ಕಂಪನಿ ಜಿಲ್ಲಾ ಪ್ರಬಂಧಕ ಮಿಥುನ್, ಮಂಜೇಶ್ವರ ತಹಸೀಲ್ದಾರ್ ಪಿ.ಜಾನ್ ವರ್ಗೀಸ್, ಲೋಕೋಪಯೋಗಿ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಸಿ.ಜೆ.ಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.
ತಲಪ್ಪಾಡಿಯಿಂದ ಮಂಜೇಶ್ವರ ವರೆಗಿನ ರಾಷ್ಟ್ರೀಯ ಹೆದ್ದಾರಿ ಬದಿಯ ತ್ಯಾಜ್ಯ ತೆರವಿಗೆ ಕುಂಜತ್ತೂರು ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ 52 ವಿದ್ಯಾರ್ಥಿ ಪೋಲೀಸ್ ಕೆಡೆಟ್‌ಗಳು, ವಿದ್ಯಾರ್ಥಿ ಪೋಲೀಸ್ ಸಮುದಾಯ ಪೋಲೀಸ್ ಅಧಿಕಾರಿ ಉಮೇಶ್ ನಾಯ್ಕ, ಎ.ಸಿ.ಪಿ.ಒ. ಪಿ.ಜಿ.ಅನಿತಾ, ಸ್ಥಳೀಯಾಡಳಿತ ಪದಾಧಿಕಾರಿಗಳು, ಸದಸ್ಯರು, ಜನಪ್ರತಿನಿಧಿಗಳು ನೇತೃತ್ವ ವಹಿಸಿದ್ದರು.