Advertisement
ಸೋಮವಾರದವರೆಗೆ ಕ್ಷೇತ್ರ, ಗ್ರಾಮ ಮಟ್ಟದಲ್ಲಿ ನಡೆಯುತ್ತಿದ್ದ ರಾಜಕೀಯ, ಉತ್ಸಾಹಗಳು ಮಂಗಳವಾರ ಒಮ್ಮೆಲೆ ಉಡುಪಿಗೆ ಸ್ಥಳಾಂತರಗೊಳ್ಳಲಿದೆ. ಐದೂ ಕ್ಷೇತ್ರಗಳ ಕಾರ್ಯಕರ್ತರ ಕಣ್ಣು ಮತ ಎಣಿಕೆ ಕೇಂದ್ರವಾದ ಉಡುಪಿಯ ಟಿ.ಎ.ಪೈ ಇಂಗ್ಲಿಷ್ ಮೀಡಿಯಂ ಶಾಲೆಯ ಆವರಣದತ್ತ ನೆಟ್ಟಿದೆ. ಅದೇ ರೀತಿ ಮಂಗಳವಾರ ಮಧ್ಯಾಹ್ನವಾದ ಕೂಡಲೇ ಇದು ಮತ್ತೆ ಕ್ಷೇತ್ರ, ಗ್ರಾಮ ಮಟ್ಟಕ್ಕೆ ಸ್ಥಳಾಂತರಗೊಳ್ಳಲಿದೆ.ಈ ಬಾರಿಯ ವಿಧಾನಸಭೆ ಚುನಾವಣೆಯು “ಹೈ ವೋಲ್ಟೆàಜ್’ ಕದನವಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಇದೊಂದು ಪ್ರತಿಷ್ಠೆಯ ಕಣವಾಗಿದೆ. ದಕ್ಷಿಣದ ಏಕೈಕ ರಾಜ್ಯದಲ್ಲಿರುವ ಕಾಂಗ್ರೆಸ್ ಆಡಳಿತವನ್ನು ಧೂಳಿಪಟ ಮಾಡಲು ಬಿಜೆಪಿ ರಾಜ್ಯ, ರಾಷ್ಟ್ರೀಯ ನಾಯಕರು ಧೂಳೆಬ್ಬಿಸಿ ಹರಸಾಹಸ ಪಟ್ಟಿದ್ದಾರೆ. ಹಾಗೆಯೇ ಕಾಂಗ್ರೆಸ್ಸನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಕಾಂಗ್ರೆಸ್‌ನ ರಾಜ್ಯ, ರಾಷ್ಟ್ರ ನಾಯಕರು ಶತಾಯಗತಾಯ ಹೋರಾಟವನ್ನು ನಡೆಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಒಂದೂವರೆ ತಿಂಗಳ ಹಿಂದೆ ಇದ್ದ ಚಿತ್ರಣಕ್ಕೂ, ಆಮೇಲಿನ ದಿನಗಳಲ್ಲಿ ಮೂಡಿದ್ದ ಚಿತ್ರಣಕ್ಕೂ ಬಹಳ ವ್ಯತ್ಯಾಸ ಕಂಡುಬಂದಿದೆ. ಮೊದಲಿಗೆ ಈ ಕ್ಷೇತ್ರದಲ್ಲಿ ನಾವು ಬಂದೇ ಬರುತ್ತೇವೆಂದು ಚಾಲೆಂಜ್ ಮಾಡಿದವರು ಸಹ ಪ್ರಚಾರದ ಕೊನೆಯ ದಿನಗಳಲ್ಲಿ ಸಪ್ಪೆ ಮೋರೆ ಮಾಡಿಕೊಂಡಿದ್ದನ್ನು ಕಾರ್ಯಕರ್ತರೇ ಗಮನಿಸಿದ್ದಾರೆ. ಹಲವು ಉಚ್ಚ ಮಟ್ಟದ ನಾಯಕರ ಪ್ರಭಾವ ಇಲ್ಲಿ ಕೆಲಸ ಮಾಡಿದಂತಿದೆ. ಜಿಲ್ಲೆಯಲ್ಲಿ ಕ್ಲೀನ್ ಸ್ವೀಪ್?
ಮೂಲಗಳ ಪ್ರಕಾರ ಜಿಲ್ಲೆಯ 5 ಕ್ಷೇತ್ರಗಳನ್ನು ಒಂದು ಪಕ್ಷ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಅದೇ ರೀತಿಯ ವಾತಾವರಣವೂ ಕೊನೆ ಕ್ಷಣದಲ್ಲಿ ಕಂಡುಬಂದಿದೆಯಾದರೂ ಅದು ಅಷ್ಟು ಸುಲಭದ ಮಾತಲ್ಲ. ಒಂದೆರಡು ಕ್ಷೇತ್ರದಲ್ಲಿ ಪಕ್ಕಾ ಹೇಳಲಾಗದು. ಕೆಲವು ಕ್ಷೇತ್ರಗಳಲ್ಲಿ ಜಾತಿ ಲೆಕ್ಕಾಚಾರಗಳೇ ತಲೆಕೆಳಗಾಗಲಿದೆ. ನಿಂತ ಅಭ್ಯರ್ಥಿಯ ಜಾತಿಯ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿದ್ದರೂ, ಆತ ಸೋತ ಉದಾಹರಣೆ ಬಹಳಷ್ಟಿದೆ. ಜಾತಿ ಮೀರಿ ಹಿಂದುತ್ವ ,ರಾಷ್ಟ್ರೀಯತೆ ಎಂದೆಲ್ಲ ಮತ ವಿಭಜನೆಗೊಂಡರೆ ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಆದಂತೆ ಮತ ಸುನಾಮಿ ಎದ್ದರೂ ಆಶ್ಚರ್ಯಪಡಬೇಕಿಲ್ಲ. ಒಟ್ಟಾರೆಯಾಗಿ ಮಂಗಳವಾರ ಎಲ್ಲರ ಎದೆಬಡಿತ ಏರುಪೇರಾಗಲಿರುವುದಂತು ಗ್ಯಾರಂಟಿ.