– ಚಿರಂಜೀವಿ ಸರ್ಜಾ ಹೀಗೆ ಹೇಳಿದ್ದು, ತಮ್ಮ “ಖಾಕಿ’ ಚಿತ್ರದ ಕುರಿತು. ಅವರು ಹಾಗೆ ಹೇಳ್ಳೋಕೆ ಕಾರಣ, ಚಿತ್ರದ ಕಥೆ ಮತ್ತು ಪಾತ್ರ. ಅಷ್ಟೇ ಅಲ್ಲ, ಇಡೀ ಚಿತ್ರತಂಡ ಮಾಡಿಕೊಂಡ ಸ್ಕ್ರಿಪ್ಟ್. ಹಾಗಾಗಿ “ಖಾಕಿ’ ಅವರ ಸಿನಿಜರ್ನಿಯಲ್ಲಿ ತುಂಬಾನೇ ಸ್ಪೆಷಲ್ ಸಿನಿಮಾ ಅಂತೆ. “ಖಾಕಿ’ ಜ.24 ರಂದು ಬಿಡುಗಡೆಯಾಗುತ್ತಿದೆ. ಆ ಕುರಿತು ಹೇಳಿಕೊಳ್ಳಲೆಂದೇ ಚಿತ್ರತಂಡದ ಜೊತೆ ಆಗಮಿಸಿದ್ದ ಅವರು ಹೇಳಿದ್ದಿಷ್ಟು. “ಇದುವರೆಗೆ ಹಲವು ಚಿತ್ರಗಳಲ್ಲಿ ಬೇರೆ ಬೇರೆ ಪಾತ್ರ ಮಾಡಿದ್ದೆ. “ಖಾಕಿ’ ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದರೂ, ಕಂಟೆಂಟ್ ಬೇಸ್ಡ್ ಸಿನಿಮಾ. ಅದರಲ್ಲೂ ನಮ್ಮ ನಡುವೆ ನಡೆಯುವ ವಿಷಯ ಕೆಲವರಿಗಷ್ಟೇ ಗೊತ್ತು. ಆದರೆ, ಬಹಳಷ್ಟು ಜನರಿಗೆ ಗೊತ್ತಿರಲ್ಲ. ಗೊತ್ತಿಲ್ಲದೆ ನಮ್ಮನ್ನ ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಎಂಬ ಅಂಶ ಇಲ್ಲಿದೆ. ಒಂದು ಏರಿಯಾದಲ್ಲಿ ನಡೆಯುವಂತಹ ಕಥೆ ಇದು. ಈ ಚಿತ್ರ ಮಾಡಿದ್ದಕ್ಕೆ ಖುಷಿ ಇದೆ. ಚಿರು ಮಾಡ್ತಾನೆ ಎಂಬ ನಂಬಿಕೆ ಇಟ್ಟು, ಸಿನಿಮಾ ಕೊಟ್ಟಿದ್ದರು. ಆ ನಂಬಿಕೆ ಉಳಿಸಿಕೊಂಡಿದ್ದೇನೆ ಎಂಬ ನಂಬಿಕೆ ನನಗಿದೆ’ ಎಂದರು ಚಿರು.
Advertisement
ನಿರ್ಮಾಪಕ ತರುಣ್ ಶಿವಪ್ಪ ಅವರಿಗೆ ಒಳ್ಳೆಯ ಸಿನಿಮಾ ಮಾಡಿದ ಖುಷಿ. ಆ ಬಗ್ಗೆ ಹೇಳುವ ಅವರು, “ರಿಲೀಸ್ ಮುನ್ನವೇ ಕಣ್ಣ ಮುಂದೆ ಹಣ ಹಿಂದಿರುಗುವ ಲಕ್ಷಣವಿದೆ. ಅಷ್ಟರ ಮಟ್ಟಿಗೆ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಅದರಲ್ಲೂ ಕೆ.ಮಂಜು ಚಿತ್ರ ರಿಲೀಸ್ ಮಾಡಿಕೊಡುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ವ್ಯಾಪಾರ ಆಗ್ತಾ ಇದೆ. ಅದೇ ಚಿತ್ರದ ಮೊದಲ ಗೆಲುವು ಅಂದುಕೊಂಡಿದ್ದೇನೆ. ಚಿರು ಜೊತೆ ಹಿಂದೆ ಕೆಲಸ ಮಾಡಬೇಕಿತ್ತು. ಆಗಲಿಲ್ಲ. ಈಗ “ಖಾಕಿ’ ಮೂಲಕ ಒಂದಾಗಿದ್ದೇವೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಕಥೆಯಲ್ಲಿ ಗಟ್ಟಿತನವಿದೆ. ಚಿರು ಸಾಕಷ್ಟು ಸಹಕಾರ ಕೊಟ್ಟಿದ್ದಾರೆ. ಬೆಳಗ್ಗೆಯಿಂದ ಮಧ್ಯರಾತ್ರಿ 3.30 ವರೆಗೆ ಕೆಲಸ ಮಾಡುವ ಮೂಲಕ ಬೆಂಬಲಿಸಿದ್ದಾರೆ. ಇನ್ನು, ನಾಯಕಿ ತಾನ್ಯಾ ಹೋಪ್ ಕೂಡ ತಮ್ಮ ಪಾತ್ರವನ್ನು ನೀಟ್ ಆಗಿ ಕಟ್ಟಿಕೊಟ್ಟಿದ್ದಾರೆ. ನಿರ್ದೇಶಕ ನವೀನ್ ಕೂಡ ಅಂದುಕೊಂಡಂತೆ ಸಿನಿಮಾ ಮಾಡಿದ್ದಾರೆ. ಕನ್ನಡಕ್ಕೆ ಒಳ್ಳೆಯ ನಿರ್ದೇಶಕ ಆಗುವ ಭರವಸೆ ಮೂಡಿಸಿದ್ದಾರೆ. ಮುಂದಿನ ವಾರ ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರ ಸಹಕಾರ, ಬೆಂಬಲ ಇರಲಿ’ ಎಂದರು ತರುಣ್. ನಾಯಕಿ ತಾನ್ಯಾ ಹೋಪ್ ಅವರಿಲ್ಲಿ ಹೀರೋಗೆ ಸಹಾಯ ಮಾಡುವ ಪಾತ್ರ ಮಾಡಿದ್ದಾರಂತೆ. ಮನರಂಜನೆಯ ಚಿತ್ರ ಇದಾಗಿದ್ದು, ಎಲ್ಲ ವರ್ಗಕ್ಕೂ ಖುಷಿ ಕೊಡುತ್ತದೆ ಅಂದರು ತಾನ್ಯಾ. ನಿರ್ದೇಶಕ ನವೀನ್ ಅವರಿಗೆ ಇದು ಮೊದಲ ಚಿತ್ರ. ತರುಣ್ ಅವರಿಂದ ನಿರ್ದೇಶಕನಾಗಿದ್ದರ ಬಗ್ಗೆ ಹೇಳಿಕೊಂಡ ಅವರು, ನಿರ್ಮಾಪಕರಿಗೆ ಸಿನಿಮಾ ಪ್ರೀತಿ ಇದೆ. ಆ ಕಾರಣಕ್ಕೆ ಏನನ್ನೂ ಇಲ್ಲ ಎನ್ನದೆ ಕೊಟ್ಟು, ರಿಚ್ ಆಗಿ ಸಿನಿಮಾ ಮೂಡಲು ಕಾರಣರಾಗಿದ್ದಾರೆ. ನಮ್ಮ ಸಿನಿಮಾಗೆ ನಿಮ್ಮೆಲ್ಲರ ಬೆಂಬಲ ಇರಲಿ ಎಂದರು ನವೀನ್.