ಬೆಂಗಳೂರು: ಕನ್ನಹಳ್ಳಿ ಹಾಗೂ ಸೀಗೆಹಳ್ಳಿ ಸೇರಿದಂತೆ ಪಾಲಿಕೆಯ ಏಳು ತ್ಯಾಜ್ಯ ಸಂಸ್ಕರಣಾ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವ ಹಿಸುವಂತೆ ಅಗತ್ಯ ಕ್ರಮ ಕೈಗೊಳ್ಳಲು ಹೈಕೋರ್ಟ್ ಮಂಗಳವಾರ ಬಿಬಿಎಂಪಿಗೆ ನಿರ್ದೇಶನ ನೀಡಿದೆ. ಘನತ್ಯಾಜ್ಯ ನಿರ್ವಹಣೆ, ವಾರ್ಡ್ ಕಮಿಟಿ ರಚನೆ ಸಂಬಂಧ ಸಲ್ಲಿಕೆಯಾಗಿರುವ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಬಿ.ಎಸ್ ಪಾಟೀಲ್ ಹಾಗೂ ನ್ಯಾ. ಬಿ.ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಸ್ವಯಂಸೇವಾ ಸಂಸ್ಥೆಗಳ ಅರ್ಜಿದಾರರು, ಪಾಲಿಕೆಯ ಏಳು ತ್ಯಾಜ್ಯ ಸಂಸ್ಕರಣಾ ಘಟಕಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಕೆಲವೆಡೆ ತ್ಯಾಜ್ಯ ಸಂಸ್ಕರಣೆಯೇ ಸೂಕ್ತವಾಗಿ ಮಾಡುತ್ತಿಲ್ಲ. ಇದರಿಂದ ಸ್ಥಳೀಯರು ಹಲವು ಸಮಸ್ಯೆಗಳನ್ನ ಎದುರಿಸುತ್ತಿದ್ದರೂ ಪಾಲಿಕೆ ಸ್ಪಂದಿಸುತ್ತಿಲ್ಲ ಎಂದು ನ್ಯಾಯಪೀಠಕ್ಕೆ ದೂರಿದರು.
ವಿಚಾರಣೆ ವೇಳೆ ಹಾಜರಿದ್ದ ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಮಾಹಿತಿ ನೀಡಿ, ಏಳು ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಸಣ್ಣಪುಟ್ಟ ತೊಂದರೆಗಳಿದ್ದು. ಉಳಿದಂತೆ ಕಾರ್ಯ ನಿರ್ವಹಣೆ ನಡೆಯುತ್ತಿದೆ ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ತ್ಯಾಜ್ಯ ನಿರ್ವಹಣಾ ಘಟಕಗಳು ಪರಿಸರ ದೃಷ್ಟಿಯಿಂದ ಯಾವುದೇ ಲೋಪವಿಲ್ಲದೆ ಕಾರ್ಯನಿರ್ವಹಿಸಬೇಕು. ಹೀಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಪಾಲಿಕೆಯ ಜವಾಬ್ದಾರಿಯಾಗಿದ್ದು, ತ್ಯಾಜ್ಯ ಸಂಸ್ಕರಣಾ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸರ್ಕಾರದ ಇನ್ನಿತರೆ ಯಾವ ಇಲಾಖೆಗಳಿಂದ ಸಹಕಾರ ಬೇಕಿದೆ? ಎಂಬುದರ ಪ್ರಮಾಣಪತ್ರದೊಂದಿಗೆ ಮಾಹಿತಿ ನೀಡಿದರೆ ಕೋರ್ಟ್ ಈ ಕುರಿತು ನಿರ್ದೇಶನ ನೀಡುವುದಾಗಿ ಪಾಲಿಕೆಗೆ ಸೂಚಿಸಿತು.
ನ್ಯಾಯಾಲಯದ ಆದೇಶದಂತೆ ಇದುವರೆಗೂ ವಾರ್ಡ್ ಸಮಿತಿ ಸಭೆ, ತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸದ ವಾರ್ಡ್ ಸಮಿತಿ ಸಂಚಾಲಕರು, ಪಾಲಿಕೆ ಸದಸ್ಯರು, ಪಾಲಿಕೆ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಎಂದು ಆಯುಕ್ತರಿಗೆ ನಿರ್ದೇಶಿಸಿತು. ನ್ಯಾಯಾಲಯದ ಮುಂದಿನ ವಿಚಾರಣೆ ವೇಳೆ ಆದೇಶ ಪಾಲಿಸಿದವರ ಪಟ್ಟಿ ನೀಡುವಂತೆ ತಾಕೀತು ಮಾಡಿ, ಅವರ ವಿರುದ್ಧ ಕ್ರಮಕ್ಕೆ ಆದೇಶಿಸುವ ಎಚ್ಚರಿಕೆ ನೀಡಿತು.
50 ಸಾವಿರ ರೂ. ದಂಡ ಪಾವತಿ: ವಾರ್ಡ್ ಸಮಿತಿ ಸಭೆಗಳನ್ನು ನಡೆಸದೆ ಹಾಗೂ ಘನತ್ಯಾಜ್ಯ ನಿರ್ವಹಣೆ ಸಂಬಂಧ ಸೂಕ್ತ ಕ್ರಮಗಳನ್ನು ತೆಗದುಕೊಳ್ಳುವಲ್ಲಿ ವಿಫಲವಾದ ಕಾರಣದಿಂದ ಈ ಹಿಂದೆ ನ್ಯಾಯಾಲಯ ವಿಧಿಸಿದ್ದ 50 ಸಾವಿರ ರೂ. ದಂಡವನ್ನು ಪಾಲಿಕೆ ಆಯುಕ್ತರು ಕಟ್ಟಿದರು. ಪಾಲಿಕೆ ಪರಆಯುಕ್ತರು ಈ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ ಹೆಸರಿಗೆ 50 ಸಾವಿರ ರೂ. ಚೆಕ್ ನೀಡಿದರು.