ಬೆಂಗಳೂರು: ರಾಜ್ಯದ ಹುಲಿ ಸಂರಕ್ಷಣಾ ಉದ್ಯಾನವನಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುವುದು ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಮಂಗಳವಾರ 11ನೇ ಹುಲಿ ಸಂರಕ್ಷಣಾ ಪ್ರತಿಷ್ಠಾನ ಆಡಳಿತ ಮಂಡಳಿಯ ಸಭೆ ನಡೆಸಿದ ಅವರು, ಹುಲಿಗಳ ಸಂರಕ್ಷಣೆ ಜತೆಗೆ ಅವುಗಳ ಸಂರಕ್ಷಣಾ ಉದ್ಯಾನವನಗಳನ್ನು ತಂತ್ರಜ್ಞಾನಗಳ ಬಳಕೆ ಮೂಲಕ ಅಭಿವೃದ್ಧಿ ಮಾಡಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ 100 ಚದರ ಅಡಿ ವ್ಯಾಪ್ತಿಯಲ್ಲಿ 12 ಹುಲಿಗಳಿವೆ. ಹುಲಿಗಳ ಸಂಖ್ಯೆಯಲ್ಲಿ ಇಡೀ ದೇಶದಲ್ಲಿ ನಮ್ಮ ರಾಜ್ಯ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಹೀಗಾಗಿ ಹುಲಿಗಳ ಸಂರಕ್ಷಣೆ ಮಾಡುವ ಮೂಲಕ ಅವುಗಳ ಸಂತತಿಯನ್ನು ಉಳಿಸಬೇಕು. ವಿಶೇಷವಾಗಿ ನಾಗರಹೊಳೆ ಹುಲಿ ಸಂರಕ್ಷಣಾ ಪ್ರತಿಷ್ಠಾನ ವತಿಯಿಂದ ಹುಲಿಗಳಿಂದ ಹಸುಗಳನ್ನು ರಕ್ಷಿಸಲು ಸುರಕ್ಷಿತವಾದ ಶೆಡ್ ನಿರ್ಮಾಣ ಮಾಡಲಾಗಿದೆ. ಇದನ್ನು ಯಾರೂ ದುರುಪಯೋಗ ಪಡಿಸಿಕೊಳ್ಳದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಮೃಗಾಲಯಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು: ಮೃಗಾಲಯಲಕ್ಕೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡಲಾಗುವುದು. ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿಯಿಂದ ಬಳಕೆ ಮಾಡಿ ಉಳಿದ ಅನುದಾನವನ್ನು ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು ಎಂದು ತಿಳಿಸಿದರು.
ಹುಲಿ ಸಂರಕ್ಷಣಾ ಉದ್ಯಾನವನಗಳಲ್ಲಿ ಸ್ವಚ್ಛತೆ ಕಾಪಾಡುವುದು ಕೂಡ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರತಿಷ್ಠಾನದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಸಂದೀಪ್ ದವೆ, ಅರಣ್ಯ ಪಡೆಗಳ ಮುಖ್ಯಸ್ಥರಾದ ಶ್ರೀ ಸಂಜಯ್ ಮೋಹನ್ ಹಾಗೂ ಅಧಿಕಾರಿಗಳು ಹಾಜರಿದ್ದರು.