Advertisement

ಸರ್ಕಾರಿ ಪ್ರಾಥಮಿಕ ಶಾಲೆಗೆ ಹೈಟೆಕ್‌ ಸ್ಪರ್ಶ

09:26 PM Jun 15, 2019 | Lakshmi GovindaRaj |

ದೇವನಹಳ್ಳಿ: ತಾಲೂಕಿನ ಗಡಿಯಂಚಿನಲ್ಲಿರುವ ಅರದೇಶನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆ ಆಡಳಿತ ಮಂಡಳಿ ಹೈಟೆಕ್‌ ಸ್ಪರ್ಶ ನೀಡಿದೆ. ಹೀಗಾಗಿ ಪೋಷಕರು, ತಮ್ಮ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಸಲು ದುಂಬಾಲು ಬಿದ್ದಿದ್ದಾರೆ.

Advertisement

ಸರ್ಕಾರಿ ಶಾಲೆಗಳಿಗೆ ಹೈಟೆಕ್‌ ಸ್ಪರ್ಶ: ವಿಮಾನ ನಿಲ್ದಾಣ ಆಡಳಿತ ಮಂಡಳಿ ಕಾಳಜಿಯಿಂದ ಸರ್ಕಾರಿ ಶಾಲೆ, ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವಷ್ಟರ ಮಟ್ಟಿಗೆ ಸಜ್ಜುಗೊಂಡಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವು ಕಂಪನಿಗಳು, ಸರ್ಕಾರಿ ಶಾಲೆಗಳಿಗೆ ಸಿಎಸ್‌ಆರ್‌ (ಸಾಮಾಜಿಕ ಹೊಣೆಗಾರಿಕೆ) ಯೋಜನೆಯಡಿ ಉತ್ತಮ ಕಟ್ಟಡ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಿಕೊಡುತ್ತಿವೆ. ಇದರ ಪ್ರಭಾವದಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಹೈಟೆಕ್‌ ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ.

ತಾಲೂಕಿನ ಅರದೇಶನಹಳ್ಳಿ ಗ್ರಾಮವಾಗಿದ್ದು, ಇತ್ತ ನಗರವೂ ಅಲ್ಲ, ಅತ್ತ ಗ್ರಾಮೀಣವೂ ಅಲ್ಲ. ಕಳೆದ ಅರ್ಧಶತಮಾನದಿಂದ ಸರ್ಕಾರಿ ಶಾಲೆ ಅಸ್ತಿತ್ವದಲ್ಲಿದ್ದರೂ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಶಾಲೆಗಳಿಂದ ನಿಧಾನವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಜರಾಗಿಯಲ್ಲಿ ಕುಸಿತಗೊಂಡಿತ್ತು. ಈಗ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟ ಹಾಗೂ ಹೈಟೆಕ್‌ ಸ್ಪರ್ಶ ದೊರೆತಿರುವುದರಿಮದ ಖಾಸಗಿ ಶಾಲೆಗೆ ನಾನೇನೂ ಕಡಿಮೆ ಇಲ್ಲ ಎಂಬುದನ್ನು ಹೇಳುತ್ತಿವೆ. ಹೀಗಾಗಿ ಪೋಷಕರು ಮಕ್ಕಳನ್ನು ದಾಖಲಿಸಲು ಬರುತ್ತಿದ್ದಾರೆ.

ರಾಜ್ಯದಲ್ಲೇ ಮಾದರಿ ಅಂಗಣವಾಡಿ: ಇಡೀ ರಾಜ್ಯದಲ್ಲಿಯೇ ಅಂಗವಾಡಿ ನೂತನ ಕಟ್ಟಡ ಮಾದರಿಯಾಗಿದೆ. ಅನೇಕ ಶಾಲೆಗಳ ಮಾಲೀಕರು ಬಂದು ಉತ್ತಮ ಶಾಲೆ ಎಂದು ಹೇಳುತ್ತಿದ್ದಾರೆ. ಸುಮಾರು ಆರು ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಸಿ.ಎಸ್‌.ಆರ್‌. ಅಡಿಯಲ್ಲಿ ಕಟ್ಟಿಸಿಕೊಟ್ಟಿದೆ.

ಶಾಲೆಯಲ್ಲಿರುವ ಸೌಕರ್ಯಗಳು: ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ಪರಿಕರ, ದಾಸ್ತಾನು ಕೊಠಡಿ, ಮುಖ್ಯ ಶಿಕ್ಷಕರ ಕೊಠಡಿ, 14 ಕೊಠಡಿ ನಿರ್ಮಾಣ, ಗಣಕ ಯಂತ್ರ, ಕಲಿಕಾ ಕೊಠಡಿ, ಅಡಿಗೆ ಕೋಣೆ, ಸೆಮಿನಾರ್‌ಹಾಲ್‌, ಪ್ರತಿದಿನ ಬೆಳಿಗ್ಗೆ ಎಲ್ಲಾ ಮಕ್ಕಳಿಗೆ ಲಘು ಉಪಾಹಾರ ಮತ್ತು ಹಾಲು, ಸುತ್ತಮುತ್ತಲಿನ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಎರಡು ಮಾರ್ಗದಲ್ಲಿ ಶಾಲಾವಾಹನ ಸೌಕರ್ಯ, ಎಲ್ಲಾ ರೀತಿಯ ಶೆ„ಕ್ಷಣಿಕ ಪರಿಕರ ನೀಡಲಾಗುತ್ತಿದೆ.

Advertisement

ಇದೆಲ್ಲವೂ ಸಂಪೂರ್ಣ ಉಚಿತವಾಗಿದ್ದು, ಪೋಷಕರಿಗೆ ಇದರಿಂದ ಅನುಕೂಲವಾಗಲಿದೆ. ಶೇ. 10 ರಷ್ಟು ಕಟ್ಟಡ ಕೆಲಸ ಮಾತ್ರ ಆಗಬೇಕು ಎಂದು ಕಟ್ಟಡ ನಿರ್ವಹಣ ಸಂಯೋಜಕ ಟಿ.ಎಂ.ಅಮರನಾಥ್‌ ಹೇಳುತ್ತಾರೆ. ಶಾಲೆ ಆರಂಭದ ವರ್ಶಗಳಲ್ಲಿ 1ರಿಂದ 8ನೇ ತರಗತಿಗಳಿಗೆ ಕೇವಲ 92, 84, 89, 94, 84 ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು.

ಇದೀಗ 2019-20ರ ಸಾಲಿಗೆ ಹಾಲಿ ಇದ್ದ ಮತ್ತು ನೂತನವಾಗಿ ದಾಖಲಾತಿಯಾಗಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 358ಕ್ಕೆ ಏರಿಕೆಯಾಗಿದೆ. ಸೀಟುಗಳು ಮುಗಿದಿವೆಯೆಂದರೂ ಪೋಷಕರು ಒತ್ತಡ ತರುತ್ತಿದ್ದಾರೆ. ನಮ್ಮ ಗುರಿ ಇದ್ದಿದ್ದು 150 ರಿಂದ 170 ಇದ್ದದ್ದು ಈಗ ಮೂರು ಪಟ್ಟು ಹೆಚ್ಚಾಗಿದೆ ಎಂದು ಮುಖ್ಯ ಶಿಕ್ಷಕ ಜನಾರ್ಧನ್‌ ಹೇಳುತ್ತಾರೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಯ ಆಡಳಿತ ಮಂಡಳಿಗೆ ಶಾಲೆಯ ಪರಿಸ್ಥಿತಿಗಳನ್ನು ಗಮನಕ್ಕೆ ತಂದಾಗ ಸಾಮಾಜಿಕ ಹೊಣೆಗಾರಿಕೆ ಯೋಜನೆಯ ಅಡಿಯಲ್ಲಿ ಸುಮಾರು 8 ಕೋಟಿ ವೆಚ್ಚದಲ್ಲಿ ಜಿಲ್ಲೆಗೆ ಮಾದರಿಯಾಗಿ ಹೈಟೆಕ್‌ ಶಾಲೆ ನಿರ್ಮಾಣವಾಗಿದೆ. ಕಟ್ಟಡ ಪೂರ್ಣಗೊಂಡಿದೆ. ಪೋಷಕರು ಮಕ್ಕಳನ್ನು ಸೇರಿಸಲು ಮುಗಿಬೀಳುತ್ತಿದ್ದಾರೆ.
-ಕೆ.ಸಿ.ಮಂಜುನಾಥ್‌, ಜಿಪಂ ಸದಸ್ಯ

ಖಾಸಗಿ ಶಾಲೆಗಳಲ್ಲಿ ಡೊನೇಷನ್‌, ಪುಸ್ತಕ, ಸಮವಸ್ತ್ರ, ವಾಹನ ಸೌಲಭ್ಯ ಎಲ್ಲಾ ಸೇರಿ ಸುಮಾರು 40 ರಿಂದ 50 ಸಾವಿರ ವೆಚ್ಚವನ್ನು ಭರಿಸಬೇಕು. ಸರ್ಕಾರಿ ಶಾಲೆಯು ಉತ್ತಮ ಕಟ್ಟಡವನ್ನು ಹೊಂದಿ, ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ನನ್ನ ಮಕ್ಕಳನ್ನೂ ಇದೇ ಶಾಲೆಗೆ ದಾಖಲಿಸಲು ಬಂದಿದ್ದೇನೆ.
-ಸಂಗೀತಾ, ಪೋಷಕಿ

ಜುಲೈ ಮೊದಲ ವಾರದಲ್ಲಿ ಶಾಲಾ ನೂತನ ಕಟ್ಟಡ ಉದ್ಘಾಟನೆಗೊಳ್ಳಲಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಮೊದಲ ಅಂತಸ್ತು ನಿರ್ಮಾಣ ಮಾಡುವಂತೆ ಇದೇ ಕಂಪನಿಗೆ ಮನವಿ ಮಾಡಲಾಗಿದ್ದು, ಉತ್ತಮ ಸ್ಪಂದನೆ ದೊರೆತಿದೆ.
-ಕೆ.ನಾರಾಯಣಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ

ದೂರದೃಷ್ಟಿ ಚಿಂತನೆಯಿಂದ ವಿಶೇಷ ವಿನ್ಯಾಸವುಳ್ಳ ಗುಣಮಟ್ಟದ ಕಟ್ಟಡವನ್ನು ನಿರ್ಮಾಣ ಮಾಡಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶೈಕ್ಷಣಿಕ ಪ್ರಗತಿಗೆ ಕಾರ್ಯಕ್ರಮ ರೂಪಿಸುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆಗಳ ಉತ್ತಮ ಗುಣಮಟ್ಟದ ಕಟ್ಟಡವನ್ನು ನಿರ್ಮಾಣ ಮಾಡಿಕೊಡಲಾಗುತ್ತಿದೆ.
-ಹೇಮಂತ್‌ ಮಾದೇಗೌಡ, ಬಿಐಎಎಲ್‌ ಪ್ರಧಾನ ವ್ಯವಸ್ಥಾಪಕ

* ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next