Advertisement

ಶಾಲೆಗಳಲ್ಲಿ ಹೈಟೆಕ್‌ ಶೌಚಾಲಯ: ಸುನೀಲಗೌಡ

01:34 PM Jan 04, 2022 | Shwetha M |

ವಿಜಯಪುರ: ಹೆಣ್ಣು ಮಕ್ಕಳಿಗೆ ಅವರ ಸ್ವಾವಲಂಬಿ ಜೀವನಕ್ಕೆ ಶಿಕ್ಷಣ ಕೊಡಿಸುವಷ್ಟೇ ಸ್ವಾಭಿಮಾನದ ಸಂರಕ್ಷಣೆಗಾಗಿ ಶೌಚಾಲಯ ನಿರ್ಮಿಸಿ ಕೊಡುವುದು ನಮ್ಮ ಕರ್ತವ್ಯವಾಗಲಿ ಎಂದು ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಶಾಸಕ ಸುನೀಲಗೌಡ ಪಾಟೀಲ ಮನವಿ ಮಾಡಿದರು.

Advertisement

ಸೋಮವಾರ ಜಿಲ್ಲೆಯ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಅಕ್ಷರದ ಮಾತೆ ಸಾವಿತ್ರಿಬಾಯಿ ಫುಲೆಯವರ 191ನೇ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅವಳಿ ಜಿಲ್ಲೆಗಳ ಗ್ರಾಮ ಪಂಚಾಯತ್‌ ಸದಸ್ಯರು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಹೈಟೆಕ್‌ ಶೌಚಾಲಯ ನಿರ್ಮಿಸುವ ಮೂಲಕ ವಿದ್ಯಾರ್ಥಿನಿಯರ ಆತ್ಮಗೌರವ ಕಾಯುವ ಕೆಲಸ ಮಾಡೋಣ ಎಂದರು.

ಹೀಗಾಗಿ ಗ್ರಾಮ ಪಂಚಾಯತ್‌ ಸದಸ್ಯರು ಹೆಚ್ಚಿನ ಕಾಳಜಿ ತೋರಿ ನಿಮ್ಮ ಗ್ರಾಮಗಳಲ್ಲಿ, ಶಾಲೆಗಳಲ್ಲಿ ಉತ್ತಮ ರೀತಿಯಲ್ಲಿ ಶೌಚಾಲಯ ನಿರ್ಮಿಸಿ, ಸೂಕ್ತ ನಿರ್ವಹಣೆಗೆ ಅಗತ್ಯ ಇರುವ ನೀರಿನ ಸಂಪರ್ಕ ಕಲ್ಪಿಸಬೇಕು ಎಂದು ವಿನಂತಿಸಿದರು.

ಈ ಹಿಂದೆಲ್ಲ ಮಹಿಳೆಗೆ ಶಿಕ್ಷಣ ಕೊಡುತ್ತಿರಲಿಲ್ಲ, ಆ ಸಮಯದಲ್ಲಿ ಹಲವು ಕಷ್ಟಗಳನ್ನು ಎದುರಿಸಿಯೂ ಶಿಕ್ಷಣ ಪಡೆದು, ದೇಶದ ಮಹಿಳಾ ಸಮುದಾಯಕ್ಕೆ ಅಕ್ಷರ ಧಾರೆ ಎರೆಯುವ ಮೊದಲ ಗುರುವಾದವರು ಸಾವಿತ್ರಿಬಾಯಿ ಫುಲೆ. ಶಿಕ್ಷಕಿಯಾಗಿ ಸಾವಿತ್ರಿಬಾಯಿ ಫುಲೆಯವರು ಪುಣೆಯಲ್ಲಿ ಹೆಣ್ಣು ಮಕ್ಕಳಿಗೆ ಶಾಲೆ ಆರಂಭಿಸಿದ್ದಲ್ಲೆ. ಮಹಿಳೆಯರ ಹಕ್ಕುಗಳಿಗೆ ಹೋರಾಟದ ಮೂಲಕ ಧ್ವನಿ ಎತ್ತಿದ ಮಹಾನ್‌ ಚೇತನ ಎಂದರು ಬಣ್ಣಿಸಿದರು.

ಗ್ರಾಮ ಪಂಚಾಯ್ತಿಗಳಲ್ಲಿ 3 ವರ್ಷಗಳಿಂದ ಬಡವರಿಗೆ ಹೊಸ ಮನೆ ಮಂಜೂರು ಆಗಿಲ್ಲ. ಹಲವಾರು ಮನೆಗಳು ಬಿಲ್‌ ಬರದೇ ಅರ್ಧಕ್ಕೆ ನಿಂತಿವೆ. ಪ್ರತಿ ವರ್ಷ ಪ್ರತಿ ಗ್ರಾಮ ಪಂಚಾಯತ್‌ಗೆ ಕನಿಷ್ಟ 50 ಮನೆ ಮಂಜೂರು ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದರು.

Advertisement

ಉಪನ್ಯಾಸ ನೀಡಿದ ಸಂತೋಷ ಬಡಕಂಬಿ, ಮದುವೆ ನಂತರ ಪತಿಯ ಸಹಾಯದಿಂದ ಅಕ್ಷರ ಕಲಿತ ದೇಶದ ಮೊದಲ ಮಹಿಳೆ ಸಾವಿತ್ರಿಬಾಯಿ ಫುಲೆ. ತಾವು ಶಿಕ್ಷಣವನ್ನು ಸಮಾಜದ ಎಲ್ಲ ಸಮುದಾಯಗಳ ಮಹಿಳೆಯರಿಗೆ ಧಾರೆ ಎರೆಯುವಕ್ಕಾಗಿ ತಮ್ಮ 17ನೇ ವಯಸ್ಸಿನಲ್ಲಿ ಪುಣೆ ನಗರದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದರು. 4 ವರ್ಷದಲ್ಲಿ 18 ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ಅಕ್ಷರದ ಅವ್ವ ಎನಿಸಿಕೊಂಡರು ಎಂದು ಬಣ್ಣಿಸಿದರು.

ಮಹಿಳೆಯರಿಗೆ ಶಿಕ್ಷಣ ಕೊಡಿಸುವ ಜೊತೆಗೆ ಸಮಾಜದಲ್ಲಿದ್ದ ಮೂಡನಂಬಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಶಿಕ್ಷಣದಿಂದ ಮಾತ್ರ ಮೂಢನಂಬಿಕೆ ನಾಶ ಸಾಧ್ಯ ಎಂದು ಪ್ರತಿಪಾದಿಸಿದ್ದಲ್ಲದೇ, ಮಹಿಳೆಯ ಶೋಷಣೆ ಪ್ರತೀಕವಾದ ವಿಧವೆಯರ ಕೇಶ ಮುಂಡನ ವ್ಯವಸ್ಥೆ ದಿಕ್ಕರಿಸಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಓ.ಬಿ.ಗದ್ದಗಿಮಠ, ಪರಮೇಶ್ವರ ಗದ್ಯಾಳ ಹಾಗೂ ಅತಿ ಹೆಚ್ಚು ಅಂಕ ಪಡೆದ ಗ್ರಾಮ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಎಂ.ಬಿ.ಪಾಟೀಲ ಪೌಂಡೇಶನ್‌ ಕಾರ್ಯದರ್ಶಿ ಯಾಕೂಬ್‌ ಜತ್ತಿ, ನಿರ್ದೇಶಕ ಗುರಲಿಂಗ ಮಾಳಿ, ಗ್ರಾಪಂ ಅಧ್ಯಕ್ಷ ಬಸನಿಂಗ ನಿಡೋಣಿ, ಆರ್‌.ಎಚ್‌.ಬಜಂತ್ರಿ, ಸುರೇಶ ಪವಾರ, ಶಾಮಣ್ಣಾ ಪೂಜೇರಿ, ಓ.ಬಿ.ಗದ್ದಗಿಮಠ, ಮೇಲಗಿರಿ ಹೊಸಮನಿ, ಸಿದ್ದಣ್ಣಾ ಕೊಂಗನಳ್ಳಿ, ವಸಂತ ಪತ್ತಾರ, ಸಿದ್ದಣ್ಣಾ ಕಾಂಖಂಡಕಿ, ಚಿದಾನಂದ ಹಿರೇಮಠ, ವಿನಾಯಕ ಜಮಖಂಡಿ, ರಮೇಶ ದೊಡಮನಿ, ವಿನೋದ ಮಾಳಿ, ಹಣಮಂತ ಹೊಸಮನಿ, ಸಿದ್ದಣ್ಣಾ ಆರ್‌. ದೊಡಮನಿ, ಎಚ್‌. ಕೆ.ಸಿದ್ದನಾಥ, ಇದ್ದರು. ಶಾಂತವಿರಯ್ಯ ಹಿರೇಮಠ ನಿರೂಪಿಸಿದರು. ರಾಕೇಶ ಮಾಳಿ ಸ್ವಾಗತಿಸಿದರು. ಅನಿಲ ಜಮಖಂಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next