ಚಳ್ಳಕೆರೆ: ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕರಿಗೆ ಶೌಚಾಲಯದ ಸೌಲಭ್ಯ ಒದಗಿಸಲು ನಿರ್ಧರಿಸಿರುವ ನೂ ಸ್ಪೇಸ್ ಇಂಡಿಯಾ ಲಿಮಿಟೆಡ್(ಇಸ್ರೋ) ಕಂಪನಿಯ ಕಾರ್ಯ ಸ್ವಾಗತಾರ್ಹ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನೂತನ ಶೌಚಾಲಯದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕೋವಿಡ್ ಸೇರಿದಂತೆ ಹಲವಾರು ರೋಗಗಳಿಂದ ಜನರು ಮುಕ್ತರಾಗುವ ಸಂದರ್ಭ ಒದಗಿಬಂದಿದೆ. ಕೋವಿಡ್ ನಿಯಂತ್ರಣಕ್ಕೆ ವೈದ್ಯರು ಮತ್ತು ಸಿಬ್ಬಂದಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ನಗರದ ಸಾರ್ವಜನಿಕ ಆಸ್ಪತ್ರೆಗೆ ಇನ್ನೂ ಹಲವಾರು ರೀತಿಯ ಸೌಲಭ್ಯ ಕಲ್ಪಿಸಬೇಕಿದೆ. ಉತ್ತಮ ಕಟ್ಟಡ ನಿರ್ಮಾಣಗೊಂಡು ಸಾರ್ವಜನಿಕ ಸೇವೆಗೆ ಆದಷ್ಟು ಬೇಗ ಸಮರ್ಪಿತವಾಗಲಿ ಎಂದು ಹಾರೈಸುತ್ತೇನೆ ಎಂದರು.
ನೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ನ ಚೇರ್ಮೆನ್ ಜಿ.ನಾರಾಯಣ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಇಸ್ರೋ ಸಹಕಾರದಿಂದ ಈ ಕಾರ್ಯವನ್ನು ನಾಡಿದೆಲ್ಲೆಡೆ ಮಾಡಲಾಗುತ್ತಿದೆ. ಒಟ್ಟು 60 ಸಾವಿರ ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಜ್ಯದ 20 ಜಿಲ್ಲಾ ಕೇಂದ್ರಗಳಲ್ಲಿ ಸುಲಭ ಇಂಟರ್ ನ್ಯಾಷನಲ್ ಸಹಯೋಗದೊಂದಿಗೆ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣವನ್ನು ನಮ್ಮ ಸಂಸ್ಥೆ ಮಾಡಲಿದ್ದು, ಸುಲಭ ಇಂಟರ್ ನ್ಯಾಷನಲ್ ಸೇವೆ ಮುಂದುವರಿಸುತ್ತಿದೆ. ದೇಶದೆಲ್ಲೆಡೆ 15 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಚಳ್ಳಕೆರೆಯಲ್ಲಿ ಈಶೌಚಾಲಯ ನಿರ್ಮಿಸಲಾಗುತ್ತಿದೆ. ಸ್ವತ್ಛ ಭಾರತ ಅಭಿಯಾನ ಯೋಜನೆಯಡಿ ಈ ಕಾರ್ಯ ಮುಂದುವರಿಯುವುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಡಳಿತಾಧಿಕಾರಿ ಡಾ.ಜೆ.ಡಿ.ವೆಂಕಟೇಶ್, ಕೇವಲ ಎರಡು ದಿನಗಳ ಅವಧಿಯಲ್ಲಿ ಈ ಸಂಸ್ಥೆ ಅತ್ಯಂತ ಕಾಳಜಿಯಿಂದ ಶೌಚಾಲಯ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದಾಗ ಕೂಡಲೇ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಅನುಮತಿ ಪಡೆಯಲಾಗಿದೆ. ಎಲ್ಲಾ ರೀತಿಯ ಸುಸಜ್ಜಿತ ಸುಲಭ ಶೌಚಾಲಯ ಇದಾಗಲಿದೆ. ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಸಂಬಂಧಿಗಳಿಗೆ ಇದು ಹೆಚ್ಚಿನ ಸದುಪಯೋಗವಾಗಲಿದೆ ಎಂದರು.
ನಗರಸಭಾ ಅಧ್ಯಕ್ಷೆ ಸಿ.ಬಿ.ಜಯಲಕ್ಷ್ಮಿ ಕೃಷ್ಣಮೂರ್ತಿ, ಮಹಡಿ ಶಿವಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಟಿ.ರಮೇಶ್ ಗೌಡ, ಗುಜ್ಜಾರಪ್ಪ, ಎಂ.ವಿಶ್ವನಾಥ, ಆರ್ಥಿಕ ತಜ್ಞ ಅಗೇಸಿಯ, ಡಾ.ಆದಿಮನಿ, ಡಾ.ಆರ್.ವೆಂಕಟೇಶ್, ಹಿರಿಯ ಫಾರ್ಮಾಸಿಸ್ಟ್ ಎನ್.ಪ್ರೇಮಕುಮಾರ್, ಸಹಾಯಕ ಆಡಳಿತಾಧಿಕಾರಿ ಶ್ರೀದೇವಿ, ಅಧೀಕ್ಷಕಿ ರಾಜೇಶ್ವರಿ, ಮ್ಯಾಟ್ರನ್ ಮಂಜುಳಾ, ಕೃಷ್ಣಮೂರ್ತಿ, ಆರ್.ಪ್ರಸನ್ನಕುಮಾರ್ ಮುಂತಾದವರು ಉಪಸ್ಥಿತರಿದ್ದರು.