Advertisement

ಮರವೂರು ಸೇತುವೆ ರಕ್ಷಣೆಗೆ ಹೈಟೆಕ್‌ ತಂತ್ರಜ್ಞಾನ

02:35 AM Apr 26, 2019 | Sriram |

ಬಜಪೆ: ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಮರವೂರು ಸೇತುವೆಯ ಸ್ಲ್ಯಾಬ್‌ಗಳ ನಡುವೆ ಅಂತರ ಹಿಗ್ಗಿರುವ ಹಿನ್ನೆಲೆಯಲ್ಲಿ ಹೈಟೆಕ್‌ ಶೈಲಿಯ ವಿನೂತನ ಮಾದರಿ ಸ್ಟ್ರಿಪ್‌ ಸೀಲ್ ವಿಸ್ತರಣೆ ಜೋಡಣೆಯನ್ನು ರಾಜ್ಯ ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ.

Advertisement

ಇಲಾಖೆಯ ಬೆಂಗಳೂರಿನ ತಾಂತ್ರಿಕ ಸಲಹೆಗಾರರ ಸೂಚನೆಯ ಮೇರೆಗೆ ಇದೀಗ ಕೋಲ್ಕತ್ತದಿಂದ ಆಗಮಿಸಿರುವ ತಾಂತ್ರಿಕ ಪರಿಣತರು ಮರವೂರು ಸೇತುವೆಯಲ್ಲಿ ವಿಸ್ತರಣೆ ಜೋಡಣೆ ಆರಂಭಿಸಿದ್ದಾರೆ. ಬುಧವಾರ ಈ ಕಾಮಗಾರಿ ಆರಂಭಗೊಂಡಿದ್ದು, ಒಂದು ವಾರದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಹಳೆಯ ಸೇತುವೆಗಳ ಸ್ಲ್ಯಾಬ್‌ಗಳ ನಡುವೆ ಅಂತರ ಸಮಯ ಕಳೆದಂತೆ ಹಿಗ್ಗುವುದು ಹಾಗೂ ಕುಗ್ಗುವ ಸ್ವರೂಪ ಪಡೆದುಕೊಳ್ಳುತ್ತದೆ. ಇದರಂತೆ ಈ ಹಿಂದೆ ರಾಡ್‌ಗಳನ್ನು ಹಾಕಿ ಈ ವಿಸ್ತರಣೆಯನ್ನು ಜೋಡಣೆ ಮಾಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನದಲ್ಲಿ ವಿಸ್ತರಣೆ ಜೋಡಣೆಗೆ ವಿನೂತನ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಅದರಂತೆ, ಸ್ಲ್ಯಾಬ್‌ನ ಸ್ವಲ್ಪ ಭಾಗವನ್ನು ತುಂಡರಿಸಿ, ಅದರೊಳಗಡೆ ಇರುವ ರಾಡ್‌ಗೆ ವೆಲ್ಡ್ ಮಾಡುವ ಮೂಲಕ ಜೋಡಣೆ ನಡೆಸಲಾಗುತ್ತದೆ. ರಾ.ಹೆ.ಪ್ರಾಧಿಕಾರದ ಬಹುತೇಕ ಸೇತುವೆಗಳನ್ನು ಇದೇ ಮಾದರಿಯಲ್ಲಿ ನಿರ್ವಹಿಸಲಾಗುತ್ತದೆ. ಅದೇ ರೀತಿ ಮರವೂರು ಸೇತುವೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಸೇತುವೆಯ ಫಿಲ್ಲರ್‌ನ ಮೇಲೆ ಎರಡು ಸ್ಲ್ಯಾಬ್‌ಗಳು ಕೂಡುವಲ್ಲಿ ನಡುವೆ ಅಂತರ ಹೆಚ್ಚಾಗಿ ಬಿರುಕು ಕಾಣಿಸಿಕೊಂಡಿತ್ತು. ಇದರಿಂದ ಲಘುವಾಹನಗಳಿಗೆ ಹೆಚ್ಚಿನ ತೊಂದರೆಯಾಗುತ್ತಿತ್ತು. ಜತೆಗೆ ಈ ಅಂತರದ ಮೂಲಕ ಸೇತುವೆಯ ಕೆಳಗೆ ಹರಿಯುವ ನದಿ ನೀರು ಕೂಡ ಕಾಣಿಸುತ್ತಿತ್ತು. ಆದರೆ, ಕೆಲವು ಸಮಯದ ಹಿಂದೆ ಡಾಮರೀಕರಣ ಕಾರಣ ಅದು ತಾತ್ಕಾಲಿಕವಾಗಿ ಪರಿಹಾರ ಕಂಡಿತ್ತು. ಅದರೆ ಮತ್ತೆ ಸೇತುವೆಯ ಸ್ಲ್ಯಾಬ್‌ಗಳ ಅಂತರ ಅಧಿಕವಾದ ಹಿನ್ನೆಲೆಯಲ್ಲಿ ಇದೀಗ ಲೋಕೋಪಯೋಗಿ ಇಲಾಖೆ ಕಾಮಗಾರಿಗೆ ಮುಂದಾಗಿದೆ.

ಈ ಹಿಂದೆಯೇ ಎಚ್ಚರಿಸಿದ್ದ ಉದಯವಾಣಿ
5ವರ್ಷದ ಹಿಂದೆ ಸೇತುವೆಯ ಸ್ಲ್ಯಾಬ್‌ಗಳ ನಡುವಿನ ಅಂತರ ಹೆಚ್ಚಾದ ಕುರಿತಂತೆ ಉದಯವಾಣಿ ವರದಿ ಮಾಡಿತ್ತು. ಸ್ಲ್ಯಾಬ್‌ಗಳ ಬಿರುಕು ದೊಡ್ಡದಾದ ಕಾರಣ ಲಘು ವಾಹನಗಳಿಗೆ ತೊಂದರೆಯ ಬಗ್ಗೆಯೂ ಅಂದು ಉಲ್ಲೇಖೀಸಲಾಗಿತ್ತು.

Advertisement

ಅದು ಶಾಶ್ವತ ಪರಿಹಾರವಾಗಲಿಲ್ಲ. ಮರವೂರು ಸೇತುವೆಗೆ 8 ಫಿಲ್ಲರ್‌ಗಳಿವೆ. ಅದರ ಮೇಲೆ ಸುಮಾರು 9 ಸ್ಲ್ಯಾಬ್‌ಗಳಿವೆ. ಈ ಪೈಕಿ 8 ಕಡೆಗಳಲ್ಲಿ ವಿಸ್ತರಣೆ ಜೋಡಣೆ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ವಿಮಾನ ನಿಲ್ದಾಣದಿಂದ ಮಂಗಳೂರು ಕಡೆಗೆ ಹೋಗುವಾಗ ಸೇತುವೆಯ ಬಲಬದಿಯ ಕಾಮಗಾರಿಯನ್ನು ಮಾಡಲಾಗುತ್ತದೆ. ಎಡಬದಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ವಾಹನ ದಟ್ಟಣೆಯಿಂದಾಗಿ ಈಗ ಸಂಚಾರ ಸಮಸ್ಯೆಯೂ ಉಂಟಾಗಿದೆ. ಒಂದು ಬದಿಯ ಕಾಮಗಾರಿ ಆದ ನಂತರ ಡಡಿಡಿಇನ್ನೊಂದು ಬದಿಯ ಕಾಮಗಾರಿಯನ್ನು ಮಾಡಲಾಗುತ್ತದೆ.

ಸೇತುವೆಯ ಸುರಕ್ಷತೆಗೆ ಕಾಮಗಾರಿ
ಮರವೂರು ಸೇತುವೆಯ ಸುರಕ್ಷೆ ದೃಷ್ಟಿಯಿಂದ ಸ್ಲ್ಯಾಬ್‌ಗಳ ನಡುವಿನ ಅಂತರವನ್ನು ವಿಸ್ತರಣೆ ಜೋಡಣೆ ಮೂಲಕ ಕಾಮಗಾರಿ ನಡೆಸಲಾಗುತ್ತಿದೆ. ಕೊಲ್ಕತ್ತದ ಪರಿಣತರ ಮೂಲಕ ಕಾಮಗಾರಿ ನಡೆಸಲಾಗುತ್ತಿದ್ದು, ಮುಂದಿನ ಒಂದು ವಾರದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
– ರವಿಕುಮಾರ್‌, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ

ಸ್ಲ್ಯಾಬ್‌ಗಳ ಅಂತರಸರಿಪಡಿಸಲು ಕಾಮಗಾರಿ
ಮರವೂರು ಸೇತುವೆಯಲ್ಲಿ ವಿಸ್ತರಣೆ ಜೋಡಣೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೊಂಡಿದೆ. ಸುಮಾರು 12ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದೆ. ಇತ್ತೀಚೆಗೆ ಬೆಂಗಳೂರಿನಿಂದ ಬಂದ ತಾಂತ್ರಿಕ ತಜ್ಞರು ಈ ಸೇತುವೆಯ ಸ್ಲ್ಯಾಬ್‌ಗಳ ನಡುವೆಯ ಅಂತರವನ್ನು ಕೂಡಲೇ ಸರಿಪಡಿಸಬೇಕಾಗಿದೆ ಎಂದು ಹೇಳಿದ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.
– ಉಮಾನಾಥ ಕೋಟ್ಯಾನ್‌, ಶಾಸಕರು, ಮೂಲ್ಕಿ-ಮೂಡುಬಿದಿರೆ
Advertisement

Udayavani is now on Telegram. Click here to join our channel and stay updated with the latest news.

Next