ರಾಮನಗರ: ಚನ್ನಪಟ್ಟಣ ತಾಲೂಕಿನ ಪೊಲೀಸ್ ತರಬೇತಿಶಾಲೆಯ ಪಕ್ಕದಲ್ಲಿರುವ ರೇಷ್ಮೆ ಇಲಾಖೆಗೆ ಸೇರಿದ ಭೂಮಿಯಲ್ಲಿ ಸರ್ಕಾರಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಉದ್ದೇಶಿಸಿದ್ದು, ಜಿಲ್ಲಾ ಕೇಂದ್ರ ರಾಮನಗರದಲ್ಲಿ ಆಕ್ಷೇಪ, ವಿರೋಧ ವ್ಯಕ್ತವಾಗುತ್ತಿದೆ.
ಜಿಲ್ಲಾ ಕೇಂದ್ರ ರಾಮನಗರದ ಆರ್ಥಿಕತೆಗೆ ಕಾರಣವಾಗಿರುವ ರೇಷ್ಮೆಗೂಡು ಮಾರುಕಟ್ಟೆಯನ್ನು ಚನ್ನಪಟ್ಟಣ ತಾಲೂಕಿನಗೆ ವರ್ಗಾವಣೆಯಾಗುವುದು ಜಿಲ್ಲಾಕೇಂದ್ರದ ಆರ್ಥಿಕತೆಯ ದೃಷ್ಟಿಯಲ್ಲಿ ಒಳ್ಳೆಯದಲ್ಲ ಎಂದು ಕೆಲವು ನಾಗರಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಮನಗರಕ್ಕೆ ಇರುವ ರೇಷ್ಮೆ ನಗರ ಎಂಬ ಸ್ಟೇಟಸ್‌ಗೂ ಧಕ್ಕೆಯಾಗುವ ಆತಂಕ ವ್ಯಕ್ತವಾಗಿದೆ.
ರೀಲರ್‌ಗಳ ವಿರೋಧ: ಚನ್ನಪಟ್ಟಣದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ರೀಲರ್‌ಗಳ ಸಂಘದ ಅಧ್ಯಕ್ಷ ಮುಹೀಬ್ ಪಾಷ ತೀವ್ರ ವಿರೋಧವ್ಯಕ್ತಪಡಿಸಿದ್ದಾರೆ. ರಾಮನಗರದಲ್ಲಿ ಸುಮಾರು 2000 ಸಕ್ರಿಯ ರೀಲರ್ ಗಳಿದ್ದಾರೆ. ರಾಮನಗರದಲ್ಲಿ ಹಾಲಿ ಇರುವ ರೇಷ್ಮೆ ಗೂಡು ಮಾರುಕಟ್ಟೆಗೂ, ಉದ್ದೇಶಿತ ಸ್ಥಳಕ್ಕೂ ಸುಮಾರು 6 ಕಿಮೀಗಳ ಅಂತರವಿದೆ. ಇಷ್ಟು ದೂರದಿಂದ ಗೂಡು ಖರೀದಿಸಿ ತರುವುದು ಆರ್ಥಿಕಮತ್ತು ಸಮಯದ ಕಾರಣ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಇಲ್ಲೇ ಇರಲಿ – ರೇಷ್ಮೆ ಬೆಳೆಗಾರರು: ರೇಷ್ಮೆ ಗೂಡು ಮಾರುಕಟ್ಟೆಯಿಂದಾಗಿ ರಾಮನಗರದಲ್ಲಿ ಇನ್ನಿತರೆ ವ್ಯಾಪಾರ, ವಹಿವಾಟು ಸಹ ನಡೆಯುತ್ತಿದೆ. ಹೀಗಾಗಿ ರಾಮನಗರ ನಗರ ಪ್ರದೇಶದ ಆಸುಪಾಸಿನಲ್ಲೇ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಣವಾಗಬೇಕು ಎಂದು ರೇಷ್ಮೆ ಬೆಳೆಗಾರರು ಪ್ರತಿಕ್ರಿಯಿಸಿದ್ದಾರೆ. ಹಾಲಿ ಡೀಸಿ ಕಚೇರಿ ಪಕ್ಕದಲ್ಲೇ ಇರುವ ರೇಷ್ಮೆ ಇಲಾಖೆಗೆ ಸೇರಿದ ಸ್ಥಳದಲ್ಲೇ ಹೈಟೆಕ್ ಮಾರುಕಟ್ಟೆ ನಿರ್ಮಾಣವಾಗಲಿ. ಆರ್‌ಟಿಒ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸಲಿ ಎಂಬ ಅಭಿಪ್ರಾಯಗಳು ನಾಗರಿಕರ ವಲಯದಲ್ಲಿ ವ್ಯಕ್ತವಾಗಿದೆ.
ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆಗೆ ಸೂಕ್ತ ಸ್ಥಳ ಹುಡುಕುವ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ. ರೇಷ್ಮೆ ನಾಡು ಖ್ಯಾತಿ ತಂದು ಕೊಟ್ಟ ಮಾರುಕಟ್ಟೆ ರಾಮನಗರ ತಾಲೂಕಿನಲ್ಲೇ ಸ್ಥಾಪನೆ ಯಾಗಬೇಕು. ಹಾಲಿಡೀಸಿ ಕಚೇರಿ, ಆರ್‌ಟಿಒ ಕಚೇರಿ ಇರುವುದು ಸಹ ರೇಷ್ಮೆ ಇಲಾಖೆಗೆ ಸೇರಿದ ಸ್ಥಳದಲ್ಲೇ. ಜಿಲ್ಲಾಡಳಿತ ಈ ವಿಚಾರವನ್ನು ಅರ್ಥ ಮಾಡಿಕೊಂಡು ರಾಮನಗರದಲ್ಲೇ ಹೈಟೆಕ್ ಮಾರುಕಟ್ಟೆಗೆ ಸ್ಥಳ ಕೊಡಬೇಕು.
–ಗೌತಂ, ಅಧ್ಯಕ್ಷರು, ರೇಷ್ಮೆ ಬೆಳೆಗಾರರ ಸಂಘ
ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಚನ್ನ ಪಟ್ಟಣದಲ್ಲಿ ನಿರ್ಮಾಣ ಉದ್ದೇಶದ ಹಿಂದೆ ರಾಜಕೀಯ ಹುನ್ನಾರವಿದೆ. ರಾಮನಗರ ತಾಲೂಕಿ ನಲ್ಲೇ ಸಾಕಷ್ಟು ಭೂಮಿ ಲಭ್ಯವಿದೆ. ಹೈಟೆಕ್ ಮಾರುಕಟ್ಟೆ ಇಲ್ಲೇ ನಿರ್ಮಾಣ ವಾಗಬೇಕು.
–ಬಿ.ನಾಗೇಶ್, ನಗರಸಭೆ ಮಾಜಿ ಸದಸ್ಯ
–ಬಿ.ವಿ.ಸೂರ್ಯ ಪ್ರಕಾಶ್