Advertisement

ತ್ರಾಸಿ ಗ್ರಾ.ಪಂ. ಗ್ರಂಥಾಲಯಕ್ಕೆ ಆಧುನಿಕ ಸ್ಪರ್ಶ

12:52 AM Jun 27, 2021 | Team Udayavani |

ಕುಂದಾಪುರ: ಗ್ರಾಮ ಪಂಚಾಯತ್‌ ಗ್ರಂಥಾಲಯವನ್ನೂ ಎಷ್ಟು ಸುಸಜ್ಜಿತವಾಗಿ, ಅತ್ಯಾಧುನಿಕವಾಗಿ ರೂಪಿಸಬಹುದು ಎಂಬುದಕ್ಕೆ ನಿದರ್ಶನವಾಗಿದೆ ತ್ರಾಸಿ ಗ್ರಾ.ಪಂ.ನ ಗ್ರಂಥಾಲಯ. ತಂತ್ರಜ್ಞಾನ ಆಧಾರಿತವಾಗಿ ನಿರ್ಮಾಣಗೊಂಡಿರುವ ಇದು ಆನ್‌ಲೈನ್‌ ವ್ಯವಸ್ಥೆ, ಡಿಜಿಟಲ್‌ ವಾಚನ ಅವಕಾಶಗಳೊಂದಿಗೆ ಗಮನ ಸೆಳೆಯುತ್ತಿದೆ.

Advertisement

ಗ್ರಾಮೀಣ ಗ್ರಂಥಾಲಯಗಳೆಂದರೆ ಅಷ್ಟಕ್ಕಷ್ಟೇ ಎಂದು ಮೂಗು ಮುರಿಯುವವರಿಗೆ ಉತ್ತರವಾಗಿ ಈ ಗ್ರಂಥಾಲಯವು ಹೆಚ್ಚೆಚ್ಚು ಓದುಗರನ್ನು ಆಕರ್ಷಿಸುತ್ತಿದೆ.

2 ಲಕ್ಷ ರೂ. ವೆಚ್ಚ
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ನವೀನ್‌ ಭಟ್‌ ಅವರು “ಓದುವ ಬೆಳಕು’ ಕಾರ್ಯಕ್ರಮದಡಿ ಮಕ್ಕಳಿಗೆ ಪೂರಕವಾಗಿರುವಂತೆ ಗ್ರಾಮೀಣ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲು ಸೂಚಿಸಿದ್ದು, ಅದರಂತೆ ಈ ಗ್ರಂಥಾಲಯ ರೂಪುಗೊಂಡಿದೆ. 14ನೇ ಹಣಕಾಸು ಆಯೋಗದ ಅನುದಾನ ಮತ್ತು ಪಂಚಾಯತ್‌ನ ಸ್ವಂತ ಅನುದಾನದಿಂದ 2 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಗ್ರಾ.ಪಂ. ಲೆಕ್ಕಾಧಿಕಾರಿ ಶಿವಾನಂದ್‌ ತಿಳಿಸಿದ್ದಾರೆ.

ಡಿಜಿಟಲ್‌ಗೆ ಒತ್ತು
ಜ್ಞಾನಾರ್ಜನೆಯ ಮೂಲ ಗ್ರಂಥಾಲಯ. ಜಗತ್ತನ್ನೇ ಬೆರಳ ತುದಿಯಲ್ಲಿ ನೋಡುವ ಇಂದಿನ ಮಾಹಿತಿ – ತಂತ್ರಜ್ಞಾನ, ಆವಿಷ್ಕಾರ ಯುಗದಲ್ಲಿ ವಿದ್ಯಾರ್ಥಿ, ಯುವ ಸಮೂಹಕ್ಕೆ ಡಿಜಿಟಲ್‌ ಗ್ರಂಥಾಲಯ ಆಶಾಕಿರಣ. ತ್ರಾಸಿಯ ಈ ಗ್ರಂಥಾಲಯದಲ್ಲಿ ಕಂಪ್ಯೂಟರ್‌ ಸೌಲಭ್ಯ ಇದ್ದು, ಅಲ್ಲಿರುವ ಪುಸ್ತಕಗಳು ಮಾತ್ರವಲ್ಲದೆ ಇ-ಲ್ಯಾಬ್‌ ತಂತ್ರಾಂಶದ ಮೂಲಕ ದೇಶ, ವಿದೇಶಗಳ ಸಾವಿರಾರು ಪುಸ್ತಕಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಆಸಕ್ತರು ಇಲ್ಲಿ ಕುಳಿತು ಕಂಪ್ಯೂಟರ್‌ನಲ್ಲಿ ಯಾವುದೇ ಪುಸ್ತಕಗಳನ್ನು ಓದಬಹುದಾಗಿದೆ.

ಏನೆಲ್ಲ ಅಭಿವೃದ್ಧಿ?
ಗ್ರಂಥಾಲಯ ಕಟ್ಟಡ ಹಳೆಯದಾಗಿದ್ದರೂ ದುರಸ್ತಿ ಮಾಡಿ, ಗೋಡೆಗಳಿಗೆ ಬಣ್ಣ ಬಳಿಯುವುದರ ಜತೆಗೆ ಆಕರ್ಷಕ, ಮಾಹಿತಿಪೂರ್ಣ ಕಲಾಕೃತಿಗಳನ್ನು ರಚಿಸಲಾಗಿದೆ. ಓದುವಿಕೆ, ಗ್ರಂಥಾಲಯ, ಪುಸ್ತಕಗಳ ಬಗೆಗೆ ಗಣ್ಯರ ಉಕ್ತಿಗಳನ್ನು ಬರೆಯಲಾಗಿದೆ. ನೆಲಕ್ಕೆ ಟೈಲ್ಸ್‌ ಹಾಸಲಾಗಿದೆ. ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಲು ಹೊಸ ಕಪಾಟುಗಳು, ಸಾಕಷ್ಟು ಪೀಠೊಪಕರಣಗಳನ್ನು ತರಿಸಲಾಗಿದೆ. ಸದ್ಯ 5 ಸಾವಿರಕ್ಕೂ ಅಧಿಕ ಪುಸ್ತಕಗಳಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ತರಿಸುವ ಯೋಜನೆ ಪಂಚಾಯತ್‌ನದ್ದು.

Advertisement

ಎಲ್ಲ ಗ್ರಾ.ಪಂ. ಅಧೀನದ ಗ್ರಂಥಾಲಯಗಳನ್ನು “ಓದುವ ಬೆಳಕು’ ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಲು ಸೂಚಿಸಲಾಗಿತ್ತು. ತ್ರಾಸಿ ಗ್ರಂಥಾಲಯವನ್ನು ಸುಂದರವಾಗಿ ರೂಪಿಸಿದ್ದಾರೆ. ಉತ್ತಮ ಪ್ರಯತ್ನ, ನಾನು ವೀಕ್ಷಿಸಿದ್ದೇನೆ. ಎಲ್ಲ ಗ್ರಾಮೀಣ ಗ್ರಂಥಾಲಯಗಳನ್ನು ಇದೇ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ವಿದ್ಯಾರ್ಥಿಗಳು ಸಂಜೆ 4ರಿಂದ 6ರ ವರೆಗೆ ಪ್ರಯೋಜನ ಪಡೆಯಲು ಪಠ್ಯ, ಪೂರಕ ಪುಸ್ತಕಗಳು, ಆನ್‌ಲೈನ್‌ ಮೂಲಕ ಪುಸ್ತಕಗಳನ್ನು ನೀಡಲಾಗುವುದು.
– ಡಾ| ನವೀನ್‌ ಭಟ್‌, ಉಡುಪಿ ಜಿ.ಪಂ. ಸಿಇಒ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next