ದಾವಣಗೆರೆ: ದೈಹಿಕ ನಿರ್ದೇಶಕರ ನೇಮಕಾತಿ ಸಂಬಂಧ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೆಪಿಎಸ್‌ಸಿಯಿಂದ ಕೈಗೊಂಡ ಅರ್ಹತಾ ಪರೀಕ್ಷೆ ವೇಳೆ ಮುನ್ನಾಭಾಯ್ ಎಂಬಿಬಿಎಸ್ ವಿಧಾನದಲ್ಲಿ ಕಾಪಿ ಹೊಡೆದು ಸಿಕ್ಕಿಹಾಕಿಕೊಂಡಿದ್ದ 8 ವಿದ್ಯಾರ್ಥಿಗಳ ಮಾಸ್ಟರ್ ಮೈಂಡ್ ವ್ಯಕ್ತಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ಕಾರ್ಯದರ್ಶಿ ರಾಮಚಂದ್ರಯ್ಯ ಬಂಧಿತ ಆರೋಪಿ. ಕೆಲಸ ಕೊಡಿಸುವುದಾಗಿ ಹೇಳಿ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರಿಗೆ ಸಿಕ್ಕಿಬಿದ್ದು, ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿದ್ದ ರಾಮಚಂದ್ರಯ್ಯನನ್ನು ದಾವಣಗೆರೆ ಪೊಲೀಸರು ಬಂಧಿಸಿ, ಕರೆ ತಂದಿದ್ದಾರೆ.
ಪರೀಕ್ಷೆ ನಕಲು ಪ್ರಕರಣದಲ್ಲಿ ರಾಮಚಂದ್ರಯ್ಯ ಅಂತರ್ಜಾಲದ ಮೂಲಕ ಕೀ ಉತ್ತರಗಳನ್ನು ಅಭ್ಯರ್ಥಿಗಳಿಗೆ ನೀಡಿದ್ದ ಎನ್ನಲಾಗಿದೆ.
2017ರ ಅಕ್ಟೋಬರ್ 16ರಂದು ನಡೆದ ಪರೀಕ್ಷೆ ವೇಳೆ ಡಿ.ಶ್ರೀನಿವಾಸ್, ಸುಭಾಷ ನಾಯ್ಕ, ತಿಪ್ಪೇಶ ನಾಯ್ಕ ಎಂಬ ಅಭ್ಯರ್ಥಿಗಳು ಕಿವಿಯೊಳಗೆ ಅತಿ ಸೂಕ್ಷ್ಮ ಎನ್ನಬಹುದಾದ ಬ್ಲೂಟೂತ್ ಹೊಂದಿದ ವಾಚ್‌ನ ಶೆಲ್ ಗಾತ್ರದ ಸ್ಪೀಕರ್, ಬನಿಯನ್‌ನಲ್ಲಿ ಬ್ಯಾಟರಿ ಚಾಲಿತ ಸಿಮ್, ಅದಕ್ಕೆ ಹೊಂದಿಕೊಂಡಂತೆ ಮೈಕೊಂದನ್ನು ಅಂಗಿಯ ತೋಳಿನ ಒಳಭಾಗದಲ್ಲಿ ಜೋಡಿಸಿಕೊಂಡು ನಕಲು ಮಾಡುತ್ತಿದ್ದುದು ಕಂಡು ಬಂದಿತ್ತು.ಈ ಅಭ್ಯರ್ಥಿಗಳು ತಮ್ಮ ತೋಳಿಗೆ ಅಳವಡಿಸಲಾಗಿದ್ದ ಮೈಕ್ ಮೂಲಕ ಪ್ರಶ್ನೆ ಹೇಳಿದರೆ, ಖಾಸಗಿ ಲಾಡ್ಜ್ನಲ್ಲಿದ್ದ ಕೃಷ್ಣನಾಯ್ಕ, ಎಂ.ಜಿ.ಪ್ರದೀಪ್ ಉತ್ತರ ಹೇಳುತ್ತಿದ್ದರು. ಇದನ್ನು ನೋಡಿದ ಅಭ್ಯರ್ಥಿಯೋರ್ವ ಪೊಲೀಸರು, ಸುದ್ದಿಗಾರರಿಗೆ ಮಾಹಿತಿ ನೀಡಿದ್ದ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈವರೆಗೆ 8 ಜನ ಆರೋಪಿಗಳನ್ನು ಬಂಧಿಸಲಾಗಿತ್ತು. ರಾಮಚಂದ್ರಯ್ಯ ಈ ಎಲ್ಲರಿಗೂ ಕಿಂಗ್‌ಪಿನ್ ಎಂದು ತಿಳಿದು ಬಂದಿದ್ದು, ಆತನನ್ನು ಇದೀಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.