Advertisement
ಹೈಟೆಕ್ ದೋಟಿ ಭಾರವಿಲ್ಲಈ ಹೈಟೆಕ್ ದೋಟಿ ಬಾಗುವುದಿಲ್ಲ, ಬಳುಕು ವುದಿಲ್ಲ. ಹೆಚ್ಚು ಭಾರವಿಲ್ಲ. ಸಾಮಾನ್ಯವಾಗಿ ಕೂಲಿ ಕಾರ್ಮಿಕರು ಬಿದಿರಿನ ದೋಟಿ ಬಳಸುತ್ತಾರೆ. 40 ಅಡಿ ಉದ್ದದ ಬಿದಿರಿನ ದೋಟಿ 20 ಕೆ.ಜಿ.ಗೂ ಹೆಚ್ಚು ತೂಕ ಇರುತ್ತದೆ. ಆದರೆ 60 ಅಡಿ ಉದ್ದದ ಈ ದೋಟಿಯ ಭಾರ 4 ಕೆ.ಜಿ., 80 ಅಡಿಗೇರಿದರೆ 6 ಕೆ.ಜಿ. 8ರಿಂದ 80 ಅಡಿ ವರೆಗಿನ ಅಡಿಕೆ ಮರಕ್ಕೆ ದೋಟಿ ತಲುಪುತ್ತದೆ. ಆದುದರಿಂದ ಮನೆಯವರೇ ಈ ದೋಟಿ ಹಿಡಿದುಕೊಂಡು ತೋಟಕ್ಕೆ ಹೋಗಿ ಅಡಿಕೆ ಕೊಯ್ಲು ಮಾಡಬಹುದು. ಕುತ್ತಿಗೆ ನೋವು, ಬೆನ್ನು ನೋವು, ಭುಜನೋವು ಬರದಂತೆ ಈ ದೋಟಿಯನ್ನು ವಿನ್ಯಾಸಗೊಳಿಸಲಾಗಿದೆ.
ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನಲ್ಲೂ ಈ ದೋಟಿ ಕಾರ್ಯನಿರ್ವಹಿಸಲು ಆರಂಭಿಸಿದೆ. ಇದರ ಕಾರ್ಯವೈಖರಿ ಗಮನಿಸಿದ ಬೆಳೆಗಾರ ಇದನ್ನು ಖರೀದಿಸಲು ಯೋಚಿಸುವ ಆವಶ್ಯಕತೆಯಿಲ್ಲ.
Related Articles
Advertisement
ಮೆಕ್ಯಾನಿಕಲ್ ಎಂಜಿನಿಯರ್ ಬಾಲಸುಬ್ರಹ್ಮಣ್ಯಹೈಟೆಕ್ ದೋಟಿ ಸಂಶೋಧಿಸಿದವರು ಅಮೆರಿಕಾದಲ್ಲಿರುವ ಮೆಕ್ಯಾನಿಕಲ್ ಎಂಜಿನಿಯರ್ ಬಾಲಸುಬ್ರಹ್ಮಣ್ಯ. ಅವರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಹಾನಗಲ್ಲು ಗ್ರಾಮದ ಕೃಷಿ ಕುಟುಂಬದಿಂದಲೇ ಬಂದವರು. 5 ವರ್ಷಗಳ ಹಿಂದೆ ಅವರಿಗೆ ತನ್ನ ತೋಟದಲ್ಲಿ ಕೃಷಿ ಕಾಮಗಾರಿಗೆ ಕಾರ್ಮಿಕರ ಅಭಾವ ಉಂಟಾಯಿತು. ಈ ಸಂದರ್ಭ ಅವರು ತನ್ನ ಸಂಶೋಧನೆ ಆರಂಭಿಸಿದರು. ಅದರ ಫಲವೇ ಹೈಟೆಕ್ ದೋಟಿ. ಕಳೆದ ಎರಡು ವರ್ಷಗಳಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಈ ದೋಟಿ ಜನಪ್ರಿಯವಾಗುತ್ತಿದೆ. ಉತ್ತರ ಕನ್ನಡ, ಹಾಸನ ಜಿಲ್ಲೆ ಸಹಿತ ಒಟ್ಟು 14 ತಾಲೂಕುಗಳಲ್ಲಿ ಈ ದೋಟಿ ಬಳಸಲಾರಂಭಿಸಿದ್ದಾರೆ. ಅದ್ಭುತ ಉಪಕರಣ
ಅಡಿಕೆ ಬೆಳೆಗಾರರಿಗೆ ಇದು ವರದಾನವೇ ಹೌದು. ಅದ್ಭುತ ಉಪಕರಣ. ಕೂಲಿ ಕಾರ್ಮಿಕರಿಲ್ಲದೇ ನಾನು ಔಷಧ ಸಿಂಪಡಿಸುತ್ತಿದ್ದೇನೆ. ದೋಟಿಯಲ್ಲಿರುವ ಕ್ಲ್ಯಾಪ್ ಬಳಸಿ, ದೋಟಿಯ ಉದ್ದ ಹೆಚ್ಚು-ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಸಣ್ಣ ಸಣ್ಣ ದೋಟಿಗಳನ್ನು ಬತ್ತಳಿಕೆಯಿಂದ ತೆಗೆಯುವಂತೆ ಇದರ ಪ್ರಕ್ರಿಯೆ ನಡೆಯುತ್ತದೆ. ಪ್ರತಿಯೊಂದು ಸಣ್ಣ ದೋಟಿಯು 5ರಿಂದ 7 ಅಡಿ ಉದ್ದವಿರುತ್ತದೆ. ದೊಡ್ಡ ಅಡಿಕೆ ಮರಕ್ಕೆ ಮತ್ತು ಸಣ್ಣ ಅಡಿಕೆ ಮರಕ್ಕೆ ಅವಶ್ಯವಿರುವಷ್ಟೇ ಉದ್ದ ನಿಯಂತ್ರಿಸಲು ಸಾಧ್ಯವಾಗುತ್ತದೆ. ಅಡಿಕೆ ಗೊನೆಯ ಸಮೀಪಕ್ಕೆ ದೋಟಿ ತಲುಪುತ್ತದೆ. ಬೋರ್ಡೋ ದ್ರಾವಣ ಪ್ರತಿಯೊಂದು ಅಡಿಕೆಗೂ ಸಿಂಪಡಿಸಿದಂತಾಗುತ್ತದೆ. ಆದುದರಿಂದ ಕೊಳೆರೋಗ ಸಂಭವಿಸುವುದಿಲ್ಲ. ಈ ಹಿಂದೆ ಒಂದು ಬಾರಿ ಔಷಧ ಸಿಂಪಡಿಕೆಗೆ 15,000 ರೂ. ಬೇಕಾಗುತ್ತಿತ್ತು. ಈ ಬಾರಿ ಎಲ್ಲವನ್ನೂ ನಾನೊಬ್ಬನೇ ನಿಭಾಯಿಸಿದ್ದೇನೆ. ಸಂಪೂರ್ಣ ಮೊತ್ತ ಉಳಿತಾಯವಾಗಿದೆ.
- ಗಣೇಶ್ ಭಟ್ ಮೈಕೆ, ಇಡ್ಕಿದು ಅಡಿಕೆ ಬೆಳೆಗಾರರು ವಿಶೇಷತೆಗಳು
· ಅಡಿಕೆ ಮರ ಏರಬೇಕಾಗಿಲ್ಲ. ಕೆಳಗೆ ನಿಂತು ಅಡಿಕೆ ಕೊಯ್ಲು ಮಾಡಬಹುದು, ಔಷಧ ಸಿಂಪಡಿಕೆ ಸಾಧ್ಯ.
· ತೂಕ ಕಡಿಮೆ. 60 ಅಡಿ ಎತ್ತರದ ವರೆಗೆ 4 ಕೆ.ಜಿ., 80 ಅಡಿ ಎತ್ತರಕ್ಕೆ 6 ಕೆ.ಜಿ. ತೂಗುತ್ತದೆ.
· ತೂಕ ಕಡಿಮೆ ಇರುವುದರಿಂದ ಸುಲಭವಾಗಿ ಸಾಗಾಟ ಸಾಧ್ಯ.
· ದೋಟಿಯನ್ನು ಅವಶ್ಯವಿರುವಷ್ಟೇ ಎತ್ತರಕ್ಕೇರಿಸಿ, ಲಾಕ್ ಮಾಡಲು ಸಾಧ್ಯವಾಗುತ್ತದೆ.
ಲಾಭಾಂಶಗಳು
· ಮನೆಯವರೇ ಈ ಕೆಲಸ ಮಾಡಬಹುದು.
· ಕಾರ್ಮಿಕರಿಗೆ ದಿನಕ್ಕೆ ನೀಡುವ 1,000ಕ್ಕೂ ಹೆಚ್ಚು ವೇತನದ ಉಳಿತಾಯ.
· ಈ ಸಲಕರಣೆ ಬಳಕೆಯಲ್ಲಿ ಯಾವುದೇ ಅಪಾಯಕಾರಿ ಸನ್ನಿವೇಶ ಉದ್ಭವಿಸುವುದಿಲ್ಲ.
· ಹಗುರವಾಗಿರುವುದರಿಂದ 8ರಿಂದ 12 ಗಂಟೆ ಕೆಲಸ ಮಾಡಬಹುದು.
· ಮರಗಳ ಕೊಂಬೆ ಸವರಲು ಇದನ್ನು ಬಳಸಬಹುದು.
· ಅಡಿಕೆ, ತೆಂಗಿನಕಾಯಿ, ಕಾಳುಮೆಣಸು, ಇನ್ನಾವುದೇ ಮರವನ್ನೇರಬೇಕಾದ ಸಂದರ್ಭ ಇದ್ದಾಗ ಈ ದೋಟಿಯನ್ನು ಬಳಸಿದರಾಯಿತು. - ಉದಯಶಂಕರ್ ನೀರ್ಪಾಜೆ