Advertisement

ಹೈಟೆಕ್‌ ಬಸ್‌ ನಿಲ್ದಾಣ ರೆಡಿ

02:31 PM May 14, 2019 | Suhan S |

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಸ್ಮಾರ್ಟ್‌ ಸಿಟಿಯಾಗಿ ಬದಲಾಗುತ್ತಿದೆ. ಆ ನಿಟ್ಟಿನಲ್ಲಿ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಇದೀಗ ಹೊಸದಾಗಿ ನಿರ್ಮಾಣವಾಗುತ್ತಿರುವ ಹೈಟೆಕ್‌ ಬಸ್‌ ನಿಲ್ದಾಣಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ.

Advertisement

ಸ್ಮಾರ್ಟ್‌ಸಿಟಿ ಯೋಜನೆಯಡಿ ದಾವಣಗೆರೆ ನಗರದಲ್ಲಿ ಒಟ್ಟು 3.58 ಕೋಟಿ ವೆಚ್ಚದಲ್ಲಿ 36 ಹೈಟೆಕ್‌ ಬಸ್‌ ನಿಲ್ದಾಣ, 13 ಇನೋವೇಷನ್‌, 3 ಹಳೆಯ ನಿಲ್ದಾಣ ತೆರವುಗೊಳಿಸಿ ಹೊಸ ನಿಲ್ದಾಣ ಸೇರಿದಂತೆ 52 ಹೊಸ ಹೈಟೆಕ್‌ ಬಸ್‌ ನಿಲ್ದಾಣಗಳ ನಿರ್ಮಾಣ ಮಾಡುವ ಯೋಜನೆ ಇದ್ದು, ಹದಡಿ ರಸ್ತೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದ ಬಳಿ ಈಗಾಗಲೇ ಹೈಟೆಕ್‌ ಬಸ್‌ ನಿಲ್ದಾಣ ತಲೆ ಎತ್ತಿದೆ.

ಕಳೆದ ಹಲವು ತಿಂಗಳಿಂದ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಹೈಟೆಕ್‌ ತಂಗುದಾಣಗಳನ್ನು ಎಲ್ಲೆಲ್ಲಿ ನಿರ್ಮಿಸಬೇಕೆಂಬುದರ ಬಗ್ಗೆ ಪಾಲಿಕೆ ಹಾಗೂ ಪೊಲೀಸ್‌ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. 52 ಬಸ್‌ ನಿಲ್ದಾಣಗಳ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ ಎನ್ನುತ್ತಾರೆ ಸ್ಮಾರ್ಟ್‌ ಸಿಟಿ ಕಾರ್ಯಪಾಲಕ ಅಭಿಯಂತರರು.

ಏನೇನಿದೆ ಸೌಲಭ್ಯ: ಸ್ಮಾರ್ಟ್‌ಸಿಟಿಗೆ ತಕ್ಕಂತೆ ನಗರದ ಬಸ್‌ ನಿಲ್ದಾಣಗಳು ಸಹ ಆತ್ಯಾಧುನಿಕ ಸೌಲಭ್ಯ ಒಳಗೊಂಡಿವೆ. ಸಾರ್ವಜನಿಕರ ಸುರಕ್ಷತೆ ಹಾಗೂ ಯಾವುದೇ ಅಹಿತಕರ ಘಟನೆ ಬಗ್ಗೆ ಮಾಹಿತಿಗಾಗಿ ಸಿಸಿ ಕ್ಯಾಮೆರಾ, ಸ್ಮಾರ್ಟ್‌ಪೋನ್‌ಗಳ ಈ ಯುಗದಲ್ಲಿ ದೂರದೂರಿನಿಂದ ಬರುವ ಜನರ ಅನುಕೂಲಕ್ಕಾಗಿ ಮೊಬೈಲ್ ಚಾರ್ಜ್‌ ಮಾಡಲು ಮೊಬೈಲ್ ಚಾರ್ಜಿಂಗ್‌ ಪಾಯಿಂಟ್ ಕಲ್ಪಿಸಲಾಗಿದೆ. ನಿಲ್ದಾಣದಲ್ಲಿ ವಿದ್ಯುತ್‌ ಸಂಪರ್ಕಕ್ಕಾಗಿ ಸಂಪೂರ್ಣ ಸೋಲಾರ್‌ ಸಿಸ್ಟಮ್‌ ಅಳವಡಿಸಲಾಗಿದೆ.

ಇನ್ನು ಪ್ರಯಾಣಿಕರು ಮನೆ, ಅಂಗಡಿಯಿಂದ ತಂದಂತಹ ಕುರುಕುಲು ತಿಂಡಿ, ತಿನಿಸುಗಳ ಕವರ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಏಕೆಂದರೆ ಈ ನಿಲ್ದಾಣಗಳಲ್ಲಿ ಒಂದೆಡೆ ವ್ಯವಸ್ಥಿತವಾಗಿ ಹಸಿ ಮತ್ತು ಒಣ ಕಸವನ್ನು ಬೇರೆ ಬೇರೆಯಾಗಿ ಹಾಕಲು ಎರಡು ಪ್ರತ್ಯೇಕ ಕಬ್ಬಿಣದ ಡಸ್ಟ್‌ಬಿನ್‌ ಇಡಲಾಗಿದೆ. ಆರಾಮಾಗಿ ಕೂರಲು ಆಕರ್ಷಕ ಆಸನ ಅಳವಡಿಸಲಾಗಿದೆ. ಜಾಹೀರಾತುದಾರರಿಗೂ ಅವಕಾಶ ಮಾಡಿಕೊಡಲಾಗಿದೆ. ಈ ರೀತಿಯ ವಿಶಿಷ್ಟ ಸೌಲಭ್ಯಗಳನ್ನು ಹೊಂದಿರುವ ಹೈಟೆಕ್‌ ಬಸ್‌ ನಿಲ್ದಾಣ ಒಂದರ ನಿರ್ಮಾಣಕ್ಕೆ 7ಲಕ್ಷ ರೂ.ವೆಚ್ಚ ಆಗಲಿದೆ.

Advertisement

ಡಿಜಿಟಲ್ ಬೋರ್ಡ್‌: ಪ್ರತಿ ನಿಲ್ದಾಣದಲ್ಲಿ ರೂಟ್ಮ್ಯಾಪ್‌ (ಮಾರ್ಗಸೂಚಿ) ಇರುವುದರಿಂದ ಡಿಜಿಟಲ್ ಬೋರ್ಡ್‌ ಮೂಲಕ ಮುಂದಿನ ನಿಲ್ದಾಣ ಯಾವುದು ಎಂಬೆಲ್ಲಾ ಮಾಹಿತಿ ತಿಳಿಯಲಿದೆ. ಇನ್ನು ನಗರ ಸಾರಿಗೆ ಬಸ್‌ಗಳಿಗೆ ಜಿಪಿಎಸ್‌ ವ್ಯವಸ್ಥೆ ಅಳವಡಿಸುವುದರಿಂದ ಬಸ್‌ ಯಾವ ಸ್ಥಳದಲ್ಲಿದೆ. ಯಾವ ಸಮಯಕ್ಕೆ ನಿಲ್ದಾಣಕ್ಕೆ ಬರುತ್ತದೆ ಎಂಬಿತ್ಯಾದಿ ಮಾಹಿತಿ ಲಭ್ಯವಾಗಲಿದೆ.

ಎಫ್‌ಎಂ ರೇಡಿಯೋ: ಬಸ್‌ಗಾಗಿ ಈ ನಿಲ್ದಾಣಗಳಲ್ಲಿ ಕೆಲಹೊತ್ತು ಕಾಯುವ ಜನರ ಬೇಸರ ಕಳೆಯಲು ನಿಲ್ದಾಣಗಳಲ್ಲಿ ಎಫ್‌.ಎಂ. ಅಳವಡಿಸಲಾಗುತ್ತದೆ. ಎಫ್‌ಎಂನಲ್ಲಿ ಬರುವ ಸುಮಧುರ ಗೀತೆ, ವಾರ್ತೆಗಳನ್ನು ಆಲಿಸುತ್ತಾ ಸಮಯ ಕಳೆಯಬಹುದಾಗಿದೆ.

ಎಲ್ಲೆಲ್ಲಿ ನಿಲ್ದಾಣಗಳು: ಪಿಜೆ ಹೋಟೆಲ್, ಎವಿಕೆ ಕಾಲೇಜು, ವಿಜಯಾ ಹೋಟೆಲ್, ಗುಂಡಿ ಮಹಾದೇವಪ್ಪ ವೃತ್ತ, ಯುಬಿಡಿಟಿ ಕಾಲೇಜು, ವಿದ್ಯಾನಗರ 2ನೇ ಬಸ್‌ ನಿಲ್ದಾಣ, ಕಾಸಲ್ ಶ್ರೀನಿವಾಸ್‌ ಶ್ರೇಷ್ಠಿ ಪಾರ್ಕ್‌, ಬಿಐಇಟಿ ಕಾಲೇಜು ಮುಂಭಾಗ, ವಿದ್ಯಾರ್ಥಿ ಭವನ ವೃತ್ತ, ಜಿಲ್ಲಾ ಕ್ರೀಡಾಂಗಣ, ಹದಡಿ ರಸ್ತೆಯ ಐಟಿಐ ಕಾಲೇಜು, ವಿಮಾನಮಟ್ಟಿ ಬಳಿ ಲೋಕಿಕೆರೆ ಜಂಕ್ಷನ್‌, ಜಿಲ್ಲಾ ನ್ಯಾಯಾಲಯ, ಐಟಿಐ 60 ಅಡಿ ರಸ್ತೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹೊಸದಾಗಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣವಾಗಲಿವೆ. ಕೆಲವೆಡೆ ಇರುವ ಬಸ್‌ ನಿಲ್ದಾಣಗಳು ಸಂಪೂರ್ಣ ಹಾಳಾಗಿದ್ದಲ್ಲಿ ಅವುಗಳನ್ನು ತೆರವುಗೊಳಿಸಿ ಹೊಸ ನಿಲ್ದಾಣ ನಿರ್ಮಿಸಲಾಗುವುದು. ಚೆನ್ನಾಗಿರುವ ನಿಲ್ದಾಣಗಳನ್ನು ಹೈಟೆಕ್‌ ಸೌಲಭ್ಯ ಒದಗಿಸಿ ನವೀಕರಣ ಮಾಡಲಾಗುವುದು.

ಕಮಾಂಡ್‌ ಕಂಟ್ರೋಲ್ ಕೇಂದ್ರ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಮಾಂಡ್‌ ಕಂಟ್ರೋಲ್ ಸೆಂಟರ್‌ ತೆರೆಯಲಾಗುವುದು. ಈ ಕೇಂದ್ರದಿಂದ ಬಸ್‌ ನಿಲ್ದಾಣಗಳಲ್ಲಿ ಏನೇ ಅಹಿತಕರ ಘಟನೆ ನಡೆದರೂ ಹಾಗೂ ಬಸ್‌ಗಳು ನಿಲ್ದಾಣಕ್ಕೆ ಬರುವುದು ತಡವಾದರೂ ಎಲ್ಲಾ ಮಾಹಿತಿಯನ್ನು ಬಸ್‌ಗಳಲ್ಲಿನ ಜಿಪಿಎಸ್‌ ಹಾಗೂ ನಿಲ್ದಾಣದ ಸಿಸಿ ಕ್ಯಾಮೆರಾದ ಮೂಲಕ ಪಡೆದು ಲೋಪದೋಷಗಳನ್ನು ಸರಿಪಡಿಸಲು ಸಹಕಾರಿಯಾಗಲಿದೆ.

ಹೀಗೆ ಹಲವು ವೈಶಿಷ್ಟ ್ಯತೆಯನ್ನೊಳಗೊಂಡು ನಿರ್ಮಾಣವಾಗುತ್ತಿರುವ ಹೈಟೆಕ್‌ ಬಸ್‌ ನಿಲ್ದಾಣಗಳು ಜನಸ್ನೇಹಿಯಾಗಿವೆ. ಜೊತೆಗೆ ಸ್ಮಾರ್ಟ್‌ಸಿಟಿ ದಾವಣಗೆರೆ ಮತ್ತಷ್ಟು ಕಳೆ ಹೆಚ್ಚಲು ಸಹಕಾರಿಯಾಗಿವೆ.

•ಕೆಂಗಲಹಳ್ಳಿ ವಿಜಯ್‌

Advertisement

Udayavani is now on Telegram. Click here to join our channel and stay updated with the latest news.

Next