ಮಹಾನಗರ: ಭಾರತಿ ಡಿಫೆನ್ಸ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಲಿ. ಸಂಸ್ಥೆಯು ಮಂಗಳೂರು ಯಾರ್ಡ್ ಕೋಸ್ಟ್ ಗಾರ್ಡ್ ಸಂಸ್ಥೆಗೆ ಹೈಸ್ಪೀಡ್ ಇಂಟರ್ ಸೆಪ್ಟರ್ ಬೋಟನ್ನು ಹಸ್ತಾಂತರಿಸಿದೆ.
ಒಟ್ಟು 15 ಇಂಟರ್‌ಸೆಪ್ಟರ್ ಬೋಟ್‌ಗಳನ್ನು ಒದಗಿಸಲು ಭಾರತಿ ಸಂಸ್ಥೆ ಉದ್ದೇಶಿಸಿದ್ದು, ಇದು ಸರಣಿಯ 5ನೇ
ಬೋಟ್ ಆಗಿರುತ್ತದೆ. ಕೋಸ್ಟ್ ಗಾರ್ಡ್‌ನ ಪ್ರಧಾನ ನಿರ್ದೇಶಕ ಎಚ್.ಪಿ. ಸಿಂಗ್ ಮತ್ತು ಗೋವಾ ವಿಭಾಗದ ಡಿಐಜಿ ಅತುಲ್ ಪರ್ಲಿಕರ್ ಮತ್ತು ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಇದನ್ನು ಹಸ್ತಾಂತರಿಸಲಾಯಿತು.
ಭಾರತಿ ಡಿಫೆನ್ಸ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಯ ಪರವಾಗಿ ಚೀಫ್ ಆಪರೇಟಿಂಗ್ ಆಫೀಸರ್ ನಿವೃತ್ತ ಡಿಐಜಿ ನರೇಂದ್ರ ಕುಮಾರ್, ನಿರ್ದೇಶಕ ವಿಜಯ್ ಪಶುಪತಿ, ಮಂಗಳೂರು ಯಾರ್ಡ್‌ನ ಅಧ್ಯಕ್ಷ ಹಾಗೂ ಶಿಪ್‌ಯಾರ್ಡ್ ಮುಖ್ಯಸ್ಥ ಪವಿತ್ರನ್ ಅಲೋಕನ್, ಜನರಲ್ ಮ್ಯಾನೇಜರ್ ಮಹೇಶ್ ಎಂ.ಎನ್.ಅವರು ಉಪಸ್ಥಿತರಿದ್ದರು.
ಇಂಟರ್‌ಸೆಪ್ಟರ್ ಬೋಟ್ ಅನ್ನು ಅಲ್ಯೂಮಿನಿಯಂ ಹಲ್‌ನಿಂದ ತಯಾರಿಸಲಾಗಿದ್ದು, 28 ಮೀ. ಉದ್ದ ಹಾಗೂ 60 ಟನ್ ಭಾರವಿದೆ. ಎರಡು ಎಂಜಿನ್‌ಗಳನ್ನು ಹೊಂದಿದ್ದು, 11 ಸಿಬಂದಿ ಪ್ರಯಾಣಿಸಬಹುದಾಗಿದೆ. ಗಸ್ತು ಕಾರ್ಯಕ್ಕೆ ಇದನ್ನು ಬಳಸಲಾಗುತ್ತದೆ.