Advertisement

4 ತಿಂಗಳಿಂದ ಪ್ರೌಢಶಾಲೆ ಶಿಕ್ಷಕರಿಗೆ ಸಂಬಳ ಕೊಟ್ಟಿಲ್ಲ

04:09 PM Aug 19, 2019 | Team Udayavani |

ಕೋಲಾರ: ಜಿಲ್ಲೆಯ ವಿವಿಧ ತಾಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ, ಕುಟುಂಬ ನಿರ್ವಹಣೆಗೆ ಹೆಣಗಾಡುತ್ತಿರುವ ಪರಿಸ್ಥಿತಿ ತಲೆದೋರಿದ್ದು, ಕೂಡಲೇ ವೇತನ ಅನುದಾನ ಬಿಡುಗಡೆಗೆ ಆಗ್ರಹಿಸಿ ಡಿಡಿಪಿಐ ಕಚೇರಿ ಮುಂದೆ ಶಿಕ್ಷಕರು ಧರಣಿ ನಡೆಸಿದರು.

Advertisement

ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮುರಳಿ ಮೋಹನ್‌ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ, ವೇತನವನ್ನೇ ನಂಬಿರುವ ಶಿಕ್ಷಕರ ಬದುಕು ಸಂಕಷ್ಟದಲ್ಲಿದೆ. ಈ ಸಂಬಂಧ ಡಿಡಿಪಿಐ, ಬಿಇಒಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಅನ್ಯಾಯ: ಕೋಲಾರ, ಶ್ರೀನಿವಾಸಪುರ ಸೇರಿದಂತೆ ಕೆಲವು ತಾಲೂಕುಗಳಲ್ಲಿ ಶಿಕ್ಷಕರಿಗೆ ವೇತನವಾಗಿಲ್ಲ, ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನದಡಿ ನೇಮಕಗೊಂಡ ಶಿಕ್ಷಕರಿಗೂ ವೇತನ ನೀಡದೇ ಇಲಾಖೆ ಅನ್ಯಾಯ ಎಸಗಿದೆ ಎಂದು ದೂರಿದರು.

ಸಾಧನೆಗೆ ನೀಡಿದ ಕೊಡುಗೆ: ಶಾಲಾ ಅವಧಿಗೆ ಮುನ್ನಾ, ಅವಧಿಯ ನಂತರವೂ ಕೆಲಸ ಮಾಡುವ ಶಿಕ್ಷಕರು ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸುವಲ್ಲಿ ಅವಿಶ್ರಾಂತ ಶ್ರಮಿಸುತ್ತಿದ್ದಾರೆ. ಜಿಲ್ಲೆಗೆ 7ನೇ ಸ್ಥಾನ ತಂದುಕೊಟ್ಟು ಘನತೆ ಉಳಿಸಿದ ಶಿಕ್ಷಕರಿಗೆ ಕಳೆದ 4 ತಿಂಗಳಿಂದ ವೇತನ ನೀಡದೇ ಇರುವುದೇ ಸಾಧನೆಗೆ ನೀಡಿದ ಕೊಡುಗೆಯಾಗಿದೆ ಎಂದು ವ್ಯಂಗ್ಯವಾಡಿದರು. ಮೇ ತಿಂಗಳಿಂದ ಸಂಬಳ ಬಟವಾಡೆಯಾಗದ ಕಾರಣ ಶಿಕ್ಷಕರು ಜೀವನ ಮುನ್ನಡೆಸಲು ಸಂಕಷ್ಟ ಅನುಭವಿಸು ವಂತಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಕೂಡಲೇ ಬಿಡುಗಡೆ ಮಾಡಿ: ಸಹಶಿಕ್ಷಕರ ಸಂಘದ ಅಧ್ಯಕ್ಷ ಎನ್‌.ಎಲ್.ಶಂಕರಪ್ಪ, ಸರ್ಕಾರದ ಆದೇಶದಂತೆ ಪ್ರತಿ ತಿಂಗಳ 5ನೇ ತಾರೀಖೀನೊಳಗೆ ಶಿಕ್ಷಕರಿಗೆ ವೇತನ ಬಟವಾಡೆ ಮಾಡಬೇಕು, ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರಿಗೂ ಬಾಕಿ ಇರುವ 4 ತಿಂಗಳ ವೇತನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

Advertisement

ಗೊಂದಲ ನಿವಾರಿಸಿ: ವೈದ್ಯಕೀಯ ವೆಚ್ಚಕ್ಕೆ ಸಂಬಂಧಿಸಿದಂತೆ ಬಿಇಒ ಕಚೇರಿಯಲ್ಲಿ ಬಾಕಿ ಇರುವ ಬಿಲ್ಲುಗಳನ್ನು ಕೂಡಲೇ ವಿಲೇವಾರಿ ಮಾಡಬೇಕು, ವರ್ಗಾವಣೆಯಲ್ಲಾಗಿರುವ ಗೊಂದಲಗಳನ್ನು ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಸಹಶಿಕ್ಷಕರ ಸಂಘದ ರಾಜ್ಯ ಸಹಕಾರ್ಯದರ್ಶಿ ದಾಸಪ್ಪ, ಜಿಲ್ಲಾ ಪದಾಧಿಕಾರಿಗಳಾದ ಮೋಹಾನಾಚಾರಿ, ಶರಣಪ್ಪ, ರಾಧಾಮಣಿ, ಗಂಗಾಧರಮೂರ್ತಿ, ಪಿ.ಲೀಲಾ, ಜಿಲ್ಲಾ ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್‌, ಪದಾಧಿಕಾರಿಗಳಾದ ಶ್ರೀರಾಮರೆಡ್ಡಿ, ಮುರಳಿ, ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಸುಬ್ರಮಣಿ, ನರಸಿಂಹಮೂರ್ತಿ, ಮುಕುಂದಾ ವೆಂಕಟೇಶಗೌಡ, ಶಿಕ್ಷಕರಾದ ವಿಜಯಲಕ್ಷ್ಮೀ, ಪದ್ಮಾವತಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next