Advertisement

ಹೈಸ್ಕೂಲ್‌ ಹೊಸ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ!

02:41 PM Nov 12, 2021 | Team Udayavani |

ಸಿಂಧನೂರು: ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ಸಾಲಗುಂದಾ ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ) ಶಾಲೆ ವ್ಯಥೆ. ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ಎರಡು ವರ್ಷ ಕಳೆದರೂ ಸ್ಥಳಾಂತರ ಭಾಗ್ಯವಿಲ್ಲದಾಗಿದೆ.

Advertisement

ಸಾಲಗುಂದಾ ಗ್ರಾಮದ ರಸ್ತೆ ಪಕ್ಕದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಹಿಂಬದಿಯಲ್ಲಿ ನಿರ್ಮಿಸಿದ ಚಿಕ್ಕದಾದ ಕೊಠಡಿಗಳಲ್ಲಿ ಪ್ರೌಢ ಶಿಕ್ಷಣ ಮುಂದುವರಿದಿದೆ. ಜಾಗದ ಕೊರತೆಯಿಂದ ಪ್ರಾಥಮಿಕ ಶಾಲೆ ಹಿಂಭಾಗದಲ್ಲಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅಲ್ಲಿಗೆ ಹೋಗಬೇಕಾದರೆ ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆ ಕೊಠಡಿ ಮೂಲೆಯಿಂದ ಹಿಂಬದಿಗೆ ಹೋಗಬೇಕು. ಅಂತಹ ದುಸ್ಥಿತಿ ಇಲ್ಲಿ ತಲೆದೋರಿದೆ.

ಭರಪೂರ ಅನುದಾನ ಬಳಕೆ

2017-18ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಡಿ ಅನುದಾನ ನೀಡಲಾಗಿದೆ. ಪ್ರತಿ ಕೊಠಡಿಗೆ 12 ಲಕ್ಷ ರೂ. ನಂತೆ 60 ಲಕ್ಷ ರೂ.ನಷ್ಟು ಖರ್ಚು ಮಾಡಲಾಗಿದೆ. ಗ್ರಾಮದ ಹೊರಭಾಗದಲ್ಲಿ ಹೈಸ್ಕೂಲ್‌ ಗಾಗಿಯೇ 5 ಸುಸಜ್ಜಿತ ಕೊಠಡಿಗಳು ತಲೆ ಎತ್ತಿವೆ. ನರೇಗಾ ಯೋಜನೆಯಡಿ 20 ಲಕ್ಷ ರೂ. ಮೀಸಲಿಟ್ಟ ಶಾಲೆ ಸುತ್ತಲೂ ಕಾಂಪೌಂಡ್‌ ನಿರ್ಮಿಸಿ ಗೇಟ್‌ ಅಳವಡಿಸಲಾಗಿದೆ. ಶೌಚಾಲಯಕ್ಕೆ 2 ಲಕ್ಷ ರೂ., ಬಿಸಿಯೂಟ ಕೊಠಡಿ 3 ಲಕ್ಷ ರೂ. ಖರ್ಚು ಮಾಡಲಾಗಿದೆ. ಸಾಕಷ್ಟು ಅನುದಾನ ವಿನಿಯೋಗಿಸಿದ್ದರೂ ಇಲ್ಲಿ 8,9 ಮತ್ತು 10ನೇ ತರಗತಿ ಓದುತ್ತಿರುವ 299 ವಿದ್ಯಾರ್ಥಿಗಳಿಗೆ ಹೊಸ ಶಾಲೆಗೆ ಪ್ರವೇಶ ಭಾಗ್ಯ ದೊರೆಯದಾಗಿದೆ.

ಜಾಗದ ಸಮಸ್ಯೆ ಇತ್ಯರ್ಥವಿಲ್ಲ

Advertisement

ಗ್ರಾಮದ ಹನುಮಂತಮ್ಮ ಗೋವಿಂದಪ್ಪ ದಾಸರ ಕುಟುಂಬ ಶಾಲೆಗಾಗಿ 1 ಎಕರೆ 10 ಗುಂಟೆ ಜಮೀನು ದಾನ ನೀಡಿದೆ. ಇದಕ್ಕೆ ಪೂರಕವಾಗಿ ಅವರ ಕುಟುಂಬದ ಹೆಸರಿಡುವುದಕ್ಕೆ ಸಂಬಂಧಿಸಿ ದಾನಪತ್ರದಲ್ಲಿ ನಮೂದಿಸಬೇಕಿತ್ತು. ಆ ಕೆಲಸ ಮಾಡಿಲ್ಲ. ಇಲಾಖೆ ಮಾಡಿದ ಎಡವಟ್ಟಿನಿಂದ ದಾನಿಗಳಿಗೆ ತೊಂದರೆಯಾಗಿದೆ. ಹೊಸ ಕಟ್ಟಡ ನಿರ್ಮಿಸಿದ ನಂತರ ಕಾಂಪೌಂಡ್‌ಗೆ ಜಾಗ ದಾನಿಗಳ ಹೆಸರು ಹಾಕಲಾಗಿದೆ. ಶಾಲೆಗೆ ಹೆಸರಿಡಲು ಇಲಾಖೆ ನಿರ್ಣಯ ಕೈಗೊಂಡಿಲ್ಲ. ಬದಲಿಗೆ ಸಮಸ್ಯೆ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆದು ಕೈ ಚೆಲ್ಲಿ ಕುಳಿತಿದೆ.

ಇದನ್ನೂ ಓದಿ: ಪೊಲೀಸ್, ಕೋರ್ಟ್ ಅಗತ್ಯವಿಲ್ಲವೇ? PM ಏಕಪಕ್ಷೀಯ ತೀರ್ಮಾನವೇ ಅಂತಿಮವೇ? ಸಿದ್ದರಾಮಯ್ಯ ಪ್ರಶ್ನೆ

ಮೈದಾನದಲ್ಲಿ ಜಾಲಿ ಬೇಲಿ

ಹೊಸ ಕಟ್ಟಡ ನಿರ್ಮಿಸಿ ಬಳಕೆ ಮಾಡದ್ದರಿಂದ ಕಿಟಕಿ, ಬಾಗಿಲು ಹಾಳಾಗುತ್ತಿವೆ. ಜೊತೆಗೆ ಮೈದಾನದ ತುಂಬ ಹುಲ್ಲು ಬೆಳೆದಿದೆ. ಕಟ್ಟಡ ಮುಂಬದಿಯಲ್ಲಿ ಜಾಲಿ ಗಿಡ ರಾರಾಜಿಸುತ್ತಿವೆ. ಶೌಚಾಲಯವಂತೂ ಬೇಲಿಯಲ್ಲಿ ಕಣ್ಮರೆಯಾಗಿದೆ. ಹೊಸ ಶಾಲೆ ಕಟ್ಟಡವೊಂದು ಪಾಳು ಬೀಳುವಂತಾಗಿದ್ದು, ದಾನಿಗಳ ಬೇಡಿಕೆ ಈಡೇರಿಸುವತ್ತ ಇಲಾಖೆ ಚಿತ್ತ ಗಮನ ಹರಿಸಬೇಕಿದೆ.

ಶಾಲೆಗೆ ಜಾಗ ನೀಡಿದ ದಾನಿಗಳ ಹೆಸರಿಡುವುದಕ್ಕೆ ಸಂಬಂಧಿಸಿ ಹಿಂದಿನ ಮುಖ್ಯ ಗುರುಗಳು ಈಗಾಗಲೇ ಇಲಾಖೆ ಹಾಗೂ ಡಿಡಿಪಿಐಗಳಿಗೆ ಪತ್ರ ಬರೆದಿದ್ದಾರೆ. ಸಮಸ್ಯೆ ಬೇಗ ಇತ್ಯರ್ಥವಾದರೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. -ಶರಣಪ್ಪ, ಮುಖ್ಯಗುರು, ಸರ್ಕಾರಿ ಪ್ರೌಢಶಾಲೆ(ಆರ್‌ಎಂಎಸ್‌ಎ), ಸಾಲಗುಂದಾ

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next