Advertisement
ಹಿಂದೆಲ್ಲ ವಿವಿಧ ಆಸಕ್ತಿಗಳಿಗೆ ಅನುಗುಣವಾದ ಕೋರ್ಸ್‌ಗಳಿರಲಿಲ್ಲ. ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಪದವಿ, ಶಿಕ್ಷಕರ ತರಬೇತಿ, ಎಂ.ಎ. ಎಂಬುದು ಒಂದು ಬಗೆಯ ದಾರಿಯಾಗಿತ್ತು. ಅಲ್ಲದಿದ್ದರೆ ಎಂಜಿನಿಯರಿಂಗ್, ಲಾ, ಮೆಡಿಕಲ್ ಎಂಬ ಇನ್ನೊಂದು ದಾರಿ ಇತ್ತು. ಆದರೆ ಇಂದು ಸಾಕಷ್ಟು ಬದಲಾಗಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ನಂತರ ಬರುವ ಅವಕಾಶಗಳತ್ತ ಒಮ್ಮೆ ದೃಷ್ಟಿ ಹಾಯಿಸಿದಾಗ ಸಾಕಷ್ಟು ಆಯ್ಕೆಗಳನ್ನು ನಾವು ಕಾಣುತ್ತೇವೆ. ಇಂದು ಶಿಕ್ಷಣ ಎಂದರೆ ಕೇವಲ ಉದ್ಯೋಗಕ್ಕಾಗಿ ಎನ್ನುವಂತಾಗಿದೆ. ಓದಿದ ತಕ್ಷಣ ಕೆಲಸ ಸಿಗಬೇಕೆಂಬುದೇ ಬಹುತೇಕ ಮಂದಿಯ ಆಸೆಯಾಗಿದೆ. ಆ ರೀತಿ ಯೋಚಿಸುವವರು ತಮ್ಮ ಭವಿಷ್ಯದ ಬಗ್ಗೆ ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕಾಗುತ್ತದೆ. ಯಾವ ಕೋರ್ಸ್‌ಗಳಿಗೆ ಹೆಚ್ಚು ಬೇಡಿಕೆ ಇದೆ, ಎಲ್ಲೆಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ ಎನ್ನುವುದರ ಪರಿಕಲ್ಪನೆ ಬೇಕಾಗುತ್ತದೆ.
ಎಷ್ಟೋ ಮಂದಿಗೆ ಯಾವ ಯಾವ ಕೋರ್ಸ್‌ಗಳಿವೆ ಎನ್ನುವುದೇ ತಿಳಿದಿರುವುದಿಲ್ಲ. ಯಾವುದೋ ಒಂದು ಪದವಿ ಪಡೆದರೆ ಸಾಕು, ಯಾವುದಾದರೂ ಒಂದು ಕೆಲಸ ಸಿಗುತ್ತದೆಂಬ ಕಲ್ಪನೆಯಲ್ಲಿ ಶಿಕ್ಷಣ ಮುಗಿಸಿ ನಂತರ ಕೆಲಸ ಸಿಗದೆ ಪರದಾಡುತ್ತಾರೆ. ತಾವು ಪಡೆದ ಶಿಕ್ಷಣಕ್ಕೂ, ಮಾಡುವ ಕೆಲಸಕ್ಕೂ ಯಾವುದೇ ರೀತಿಯ ಸಂಬಂಧವೇ ಇಲ್ಲದಂತೆ ದುಡಿಯುತ್ತ ಜೀವನ ಕಳೆಯುತ್ತಾರೆ. ಆದುದರಿಂದ ತಮ್ಮ ತಮ್ಮ ಭವಿಷ್ಯ ರೂಪಿಸುವ ಶಿಕ್ಷಣ ಪಡೆಯುವುದು ಉತ್ತಮ. ಇನ್ನು ಕೆಲವರ ಕನಸು ಸರ್ಕಾರಿ ನೌಕರಿ ಪಡೆಯುವುದಾಗಿರುತ್ತದೆ. ಪದವಿ ಪೂರೈಸಿದ ನಂತರ ಸರ್ಕಾರಿ ನೌಕರಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಾ, ಯಾವುದು ಕೈ ಹಿಡಿಯುವುದೋ ಅದರಲ್ಲಿ ಉದ್ಯೋಗ ಗಿಟ್ಟಿಸುವ ಗುರಿ ಹೊಂದಿರುತ್ತಾರೆ. ನಮ್ಮಲ್ಲಿ ಅನೇಕರು ಪೋಸ್ಟ್ ಗ್ರಾಜುವೇಶನ್ ಮಾಡಿದರೂ, ಯಾವ ಕೆಲಸ ಮಾಡಬೇಕೆಂಬುದನ್ನೇ ತಿಳಿದಿರುವುದಿಲ್ಲ. ಆದರೆ ಸರಿಯಾದ ಯೋಜನೆ ಇದ್ದಲ್ಲಿ ನಮ್ಮ ಶಿಕ್ಷಣದ ಆಯ್ಕೆ ಮೂಲಕವೇ ನಮ್ಮ ಭವಿಷ್ಯ ಕಟ್ಟಿಕೊಳ್ಳಬಹುದು. ಶಿಕ್ಷಣವೆಂದರೆ ಬರೀ ಓದಲ್ಲ, ಬರೀ ಪುಸ್ತಕದ ಜ್ಞಾನವೂ ಅಲ್ಲ, ಅದು ಮಾನವತೆಯ ವಿಕಾಸ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಸಾಹಿತ್ಯ, ಸಂಗೀತ, ಕಲೆ, ನಾಟಕ, ನೃತ್ಯ, ಕುಶಲಕಲೆಗಳಲ್ಲಿ ಆಸಕ್ತಿ ಇರುವ ಮಕ್ಕಳಿಗೆ, ಪೋಷಕರು ಬಲವಂತವಾಗಿ ಮತ್ತಾವುದೋ ಕೋರ್ಸ್‌ಗಳಿಗೆ ಸೇರಿಸಿದಾಗ ಕೆಲವರು ಮಾತ್ರ ಎರಡರಲ್ಲೂ ಸೈ ಎನಿಸಿಕೊಳ್ಳುತ್ತಾರೆ. ಆದರೆ ಬಹುತೇಕರು ವಿಫಲರಾದ ಉದಾಹರಣೆಗಳಿವೆ. ವಿದ್ಯಾರ್ಥಿಗಳಿಗೆ ಹಿರಿಯರು ಹಲವು ಬಗೆಯ ಆಯ್ಕೆಗಳ ಬಗ್ಗೆ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳು ಆಯಾಯ ಕ್ಷೇತ್ರಗಳಲ್ಲಿ ಸಾಧಿಸಿದವರ ಮಾರ್ಗದರ್ಶನ ಪಡೆಯಬಹುದು. ಅಗತ್ಯವಾದಲ್ಲಿ ಮನೋವೈದ್ಯರ, ಸಮಾಲೋಚಕರ ಸೇವೆಯನ್ನೂ ಪಡೆಯಬಹುದು. ಬಹಳ ಮುಖ್ಯವಾಗಿ ಪೋಷಕರು ತಮಗೆ ಇಷ್ಟವಾಗುವ ಅಥವಾ ಒಣ ಪ್ರತಿಷ್ಠೆ ತೋರಿಸುವ ಸಲುವಾಗಿ “ಇದನ್ನೇ ಓದು’ ಎಂದು ಮಕ್ಕಳ ಮೇಲೆ ಒತ್ತಡ ಹೇರಬಾರದು. ಅದರ ಬದಲಾಗಿ ಮಕ್ಕಳಲ್ಲಿ ಮುಕ್ತ ಮಾತುಕತೆ ನಡೆಸಿ ಅವರಿಗೆ ಆಸಕ್ತಿಯುಳ್ಳ ಕ್ಷೇತ್ರದಲ್ಲಿ ಮುನ್ನಡೆಯಲು ಅವಕಾಶ ನೀಡಬೇಕು. ಆಗ ಮಕ್ಕಳ ಮನೋಸಾಮರ್ಥ್ಯ ಹೆಚ್ಚಾಗುವುದಲ್ಲದೆ, ಅವರು ಸಾಧನೆಯ ಹಾದಿಯಲ್ಲಿ ಸಾಗುತ್ತಾರೆ.
Related Articles
Advertisement