Advertisement

“ಕರಸಮಾಧಾನ’ಯೋಜನೆ ಫ‌ಲಾನುಭವಿಗಳಿಗೆ ಹೈ ರಿಲೀಫ್

11:33 AM Nov 15, 2017 | |

ಬೆಂಗಳೂರು: ರಾಜ್ಯಸರ್ಕಾರದ “ಕರಸಮಾಧಾನ’ ಯೋಜನೆಯ ಅರ್ಹ ಫ‌ಲಾನುಭವಿಗಳಿಗೆ ಯೋಜನೆ ಜಾರಿಯಾಗುವ ಮೊದಲು ನೀಡಿದ್ದ ಭರವಸೆಯಂತೆ ಬಡ್ಡಿ ಹಾಗೂ ದಂಡದ ಮೊತ್ತದಲ್ಲಿ ಶೇ 90ರಷ್ಟು ವಿನಾಯಿತಿ ನೀಡಬೇಕು ಎಂದು ಹೈಕೋರ್ಟ್‌ ಮಂಗಳವಾರ ತೀರ್ಪು ನೀಡಿದೆ.

Advertisement

ಇದರಿಂದ “ಕರಸಮಾಧಾನ’ ಯೋಜನೆಯಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡ ತೆರಿಗೆಯ ಪೂರ್ಣ ಮೊತ್ತ ಸೇರಿದಂತೆ ಬಡ್ಡಿ ಹಾಗೂ ದಂಡದಲ್ಲಿ ಶೇ 10ರಷ್ಟು ಹಣ ಪಾವತಿಸಿದ್ದರೂ, ವಾಣಿಜ್ಯ ತೆರಿಗೆ ಆಯುಕ್ತರ ಆದೇಶಗಳಿಂದ ಚಿಂತೆಗೀಡಾಗಿದ್ದವರಿಗೆ ರಿಲೀಫ್ ದೊರೆತಂತಾಗಿದೆ. 

ಯೋಜನೆಯ ನಿಯಮಗಳಂತೆ ಪಾವತಿಸಿದ ತೆರಿಗೆಯ ಮೊತ್ತವನ್ನು ಬಡ್ಡಿಗೆ ಕಡಿತಗೊಳಿಸಿಕೊಂಡು, ಶೇ 90ರಷ್ಟು ವಿನಾಯಿತಿ ನೀಡಲು ನಿರಾಕರಿಸಿದ್ದ ವಾಣಿಜ್ಯ ತೆರಿಗೆ ಆಯುಕ್ತರುಗಳ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸುಮಾರು 20ಕ್ಕೂ ಹೆಚ್ಚು ರಿಟ್‌ ಅರ್ಜಿಗಳನ್ನು ಪುರಸ್ಕರಿಸಿರುವ ನ್ಯಾ. ವಿನೀತ್‌ ಕೊಠಾರಿ ಅವರಿದ್ದ ಏಕಸದಸ್ಯ ಪೀಠ,

ಸರ್ಕಾರ ಜಾರಿಗೊಳಿಸಿರುವ ಈ ವಿಶೇಷ ಯೋಜನೆಗೆ ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯಿದೆಯ ಕಲಂ 42 (6) ಅನ್ವಯವಾಗುವುದಿಲ್ಲ. ಹೀಗಾಗಿ ಅರ್ಜಿದಾರರು ಪಾವತಿಸಿರುವ ತೆರಿಗೆ ಹಣವನ್ನು ಬಡ್ಡಿಗೆ ಕಡಿತಗೊಳಿಸಿರುವ ಆದೇಶಗಳನ್ನು ವಜಾಗೊಳಿಸಿ, ಮೂರು ತಿಂಗಳಲ್ಲಿ ಯೋಜನೆಯಲ್ಲಿ ನಿಗದಿಪಡಿಸಿದಂತೆ ಅರ್ಜಿದಾರರಿಗೆ ಶೇ. 90ರಷ್ಟು ಮೊತ್ತ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಸರ್ಕಾರಕ್ಕೆ ಆದೇಶ ನೀಡಿದೆ.

ಏನಿದು ವಿವಾದ?: ಜು.1ರಿಂದ ದೇಶಾದ್ಯಂತ ಜಾರಿಯಾಗಲಿದ್ದ ಜಿಎಸ್‌ಟಿ ಹಿನ್ನೆಲೆ ಹಾಗೂ ಹಲವು ವರ್ಷಗಳಿಂದ ಬಾಕಿ ಉಳಿದುಕೊಂಡಿದ್ದ ತೆರಿಗೆಯನ್ನು ವಸೂಲಿ ಮಾಡುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 2017-18ರ ಬಜೆಟ್‌ನಲ್ಲಿ ” ಕರಸಮಾಧಾನ ಯೋಜನೆ’ ಘೋಷಿಸಿದ್ದರು. ಈ ಯೋಜನೆ ಲಾಭ ಪಡೆಯಲು ಮೇ 31ಕ್ಕೆ ಅಂತಿಮ ಗಡುವು ನೀಡಲಾಗಿತ್ತು.

Advertisement

ಈ ಅವಧಿಯಲ್ಲಿ ತೆರಿಗೆದಾರರು ತಾವು ಉಳಿಸಿಕೊಂಡಿದ್ದ ಪೂರ್ಣ ಮೊತ್ತದ ಪ್ರಮಾಣದ ತೆರಿಗೆ ಹಾಗೂ ದಂಡ, ಬಡ್ಡಿಯ ಶೇ 10ರಷ್ಟು ಹಣವನ್ನು ಪಾವತಿಸಿದರೇ, ಉಳಿದ ದಂಡ ಹಾಗೂ ಬಡ್ಡಿಯ ಮೊತ್ತದಲ್ಲಿ ಶೇ 90ರಷ್ಟು ಮನ್ನಾ ಮಾಡಲಾಗುವುದು ಎಂದು ಹೇಳಲಾಗಿತ್ತು.

ಅದರಂತೆ ಕಂಪೆನಿಗಳು, ಉದ್ದಿಮೆದಾರರು, ವ್ಯಾಪಾರಿಗಳು ಈ ಯೋಜನೆ ಲಾಭ ಪಡೆದುಕೊಳ್ಳಲು ಬಾಕಿ ತೆರಿಗೆ, ಶೇ 10ರಷ್ಟು ಬಡ್ಡಿ, ದಂಡದ ಮೊತ್ತ ಪಾವತಿಸಿದರೂ, ವಾಣಿಜ್ಯ ಇಲಾಖೆ ಆಯುಕ್ತರುಗಳು, ತೆರಿಗೆದಾರರು ಪಾವತಿಸಿದ ಹಣವನ್ನು ಬಡ್ಡಿಗೆ ಜಮಾ ಮಾಡಿಕೊಂಡು ಯೋಜನೆ ಅನ್ವಯವಾಗುವುದಿಲ್ಲ ಎಂದು ನೋಟಿಸ್‌ ನೀಡಿದ್ದರು.

ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯಿದೆಯ ಕಲಂ 42 (6) ಕಲಂ ಅನ್ವಯ ಯಾವುದೇ ತೆರಿಗೆ ಪಾವತಿಸಿದರೂ ಮೊದಲು ಬಡ್ಡಿಗೆ ಜಮಾ ಆಗಲಿದೆ ಎಂಬುದು ಇಲಾಖೆಯ ಸ್ಪಷ್ಟೀಕರಣವಾಗಿತ್ತು.

ಅರ್ಜಿದಾರರ ವಾದ: ವಾಣಿಜ್ಯ ಇಲಾಖೆಯ ಆದೇಶ ಪ್ರಶ್ನಿಸಿ ರೀಟೈಲ್‌ ಪ್ರೈವೈಟ್‌ ಸರ್ವೀಸ್‌ ಲಿಮಿಟೆಡ್‌, ಲಕ್ಷ್ಮೀ ಟೂಲ್ಸ್‌ ಅಂಡ್‌ ಕಾಂಪೋನೆಂಟ್ಸ್‌, ನೋಕಿಯಾ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌, ಸೆಲ್ಸ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಸೇರಿದಂತೆ 20ಕ್ಕೂ ಹೆಚ್ಚು ಕಂಪೆನಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದು.

ರಾಜ್ಯಸರ್ಕಾರ ಜಾರಿಗೊಳಿಸಿರುವ ವಿಶೇಷ ” ಕರಸಮಾಧಾನ ಯೋಜನೆ’ಗೆ ಕೆವಿಎಟ್‌ ಕಾಯಿದೆ ನಿಯಮಗಳು ಅನ್ವಯ ಆಗುವುದಿಲ್ಲ. ಹೀಗಾಗಿ ವಾಣಿಜ್ಯ ಇಲಾಖೆಯ ಆಯುಕ್ತರ ನೋಟಿಸ್‌ ರದ್ದುಗೊಳಿಸಿ, ನಿಗದಿಯಂತೆ ಶೇ 90 ರಷ್ಟು ವಿನಾಯಿತಿ ನೀಡಲು ಆದೇಶಿಸುವಂತೆ ಕೋರಿದ್ದರು.

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next