ಬೆಂಗಳೂರು: ಯಲಹಂಕ ಬಳಿ ಪುಟ್ಟೇನಹಳ್ಳಿ ಕೆರೆಯಂಚಿನ 500 ಮೀಟರ್ ವ್ಯಾಪ್ತಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಘಟಕ ಸ್ಥಾಪಿಸಲು ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ವಿದ್ಯುತ್ ಘಟಕ ಸ್ಥಾಪನೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಯಲಹಂಕ-ಪುಟ್ಟೇನಹಳ್ಳಿ ಕೆರೆ ಮತ್ತು ಪಕ್ಷಿಗಳ ಸಂರಕ್ಷಣಾ ಟ್ರಸ್ಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾ. ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಮಂಗಳವಾರ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವಿದ್ಯುತ್ ಘಟಕ ಸ್ಥಾಪನೆಗೆ ಅನುಮೋದನೆ ನೀಡುವ ಮುನ್ನ ಕಾನೂನು ಪ್ರಕಾರ ಸಾರ್ವಜನಿಕ ಅಹವಾಲು ಆಲಿಸಿಲ್ಲ. ಘಟಕ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಸಲ್ಲಿಸಿದ್ದ ಮನವಿಗಳನ್ನೂ ಪರಿಗಣಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಪ್ರತಿವಾದಿಗಳಾದ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ, ರಾಜ್ಯ ಮಾಲಿನ್ಯ ಪರಿಹಾರ ಅಧ್ಯಯನ ಪ್ರಾಧಿಕಾರ, ಅರಣ್ಯ ಇಲಾಖೆ ಮತ್ತು ಕರ್ನಾಟಕ ವಿದ್ಯುತ್ ನಿಗಮಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಅರಣ್ಯ ಇಲಾಖೆಯು 2015ರ ಏಪ್ರಿಲ್ 29ರಂದು ಕೆರೆಯನ್ನು ಪಕ್ಷಿ ಸಂಕುಲ ಸಂರಕ್ಷಣಾ ತಾಣ ಎಂದು ಘೋಷಿಸಿದೆ. ಕೆರೆಯ ಸುತ್ತ 127 ಪ್ರಕಾರದ ಪ್ರಾಣಿ, ಪಕ್ಷಿಗಳಿವೆ. ಆದರೆ, ಉದ್ದೇಶಿತ ಯಲಹಂಕ-ಪುಟ್ಟೇನಹಳ್ಳಿ ಕೆರೆಯ ನಡುವೆ ವಿದ್ಯುತ್ ಘಟಕ ಸ್ಥಾಪನೆಯಿಂದ ಕೆರೆಗಳು ಹಾಳಾಗುತ್ತವೆ. ಪ್ರಾಣಿಪಕ್ಷಿಗಳ ಜೀವಸಂಕುಲಕ್ಕೆ ಅಪಾಯ ಎದುರಾಗಲಿದೆ ಎಂದು ಟ್ರಸ್ಟಿ ಅರ್ಜಿಯಲ್ಲಿ ಹೇಳಿದೆ.