Advertisement

ಯತ್ನಾಳ್ ಹೇಳಿಕೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು: ಡಿ.ಕೆ.ಶಿವಕುಮಾರ್ ಆಗ್ರಹ

02:07 PM May 06, 2022 | Team Udayavani |

ಬೆಂಗಳೂರು: ಮುಖ್ಯಮಂತ್ರಿಯಾಗಬೇಕಾದರೆ 2500 ಕೋಟಿ ರೂ. ಹಾಗೂ ಮಂತ್ರಿ ಆಗಬೇಕಾದರೆ 100 ಕೋಟಿ ರೂ. ನೀಡಬೇಕು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿ, ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

Advertisement

ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯತ್ನಾಳ್ ಅವರು ಈಗಾಗಲೇ ಹೇಳಿರುವಂತೆ ಮುಖ್ಯಮಂತ್ರಿ ಆಗಬೇಕಾದರೆ ಎರಡೂವರೆ ಸಾವಿರ ಕೋಟಿ ರೂ., ಮಂತ್ರಿಯಾಗಬೇಕಾದರೆ 100 ಕೋಟಿ ರೂ. ನಿಗದಿಯಾಗಿದೆ. ಈ ವಿಚಾರದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು. ಯತ್ನಾಳ್ ಅವರು ಕೇಂದ್ರದ ಮಾಜಿ ಸಚಿವರಾಗಿದ್ದು ಹಾಲಿ ಶಾಸಕರು ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಉನ್ನತ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು ಎಂದರು.

ಯತ್ನಾಳ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಜೆ.ಪಿ. ನಡ್ಡಾ ಹಾಗೂ ಇತರೆ ನಾಯಕರ ಜತೆ ಈ ವಿಚಾರದ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.  ಇದು ಈ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆಗಬೇಕಾದ ಸಂಗತಿ. ಬಿಜೆಪಿ ಆಡಳಿತದಲ್ಲಿ ಸಬ್ ಇನ್ಸ್ಪೆಕ್ಟರ್, ಪಿಎಸ್ಐ ಸೇರಿದಂತೆ ವಿವಿಧ ಇಲಾಖೆ ಹುದ್ದೆಗಳ ನೇಮಕಾತಿಗೆ ಇಂತಿಷ್ಟು ಎಂದು ಹಣ ನಿಗದಿಯಾಗಿದೆ. ಹಿಂದೆ ಬೆಂಗಳೂರು ವಿವಿ ಉಪಕುಲಪತಿ ನೇಮಕ ವಿಚಾರವಾಗಿ ಪ್ರೊಫೆಸರ್ ಅಶೋಕ್ ಕುಮಾರ್ ಅವರು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಸರ್ಕಾರ ಕ್ಲೀನ್ ಚಿಟ್ ನೀಡಿತ್ತು. ಬೇರೆ ಸಮಯದಲ್ಲಿ ಈ ವಿಚಾರ ಮಾತನಾಡುತ್ತೇವೆ. ಈ ಎಲ್ಲಾ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಯತ್ನಾಳ್ ಅವರ ಹೇಳಿಕೆ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದೂರು ದಾಖಲಿಸಿಕೊಂಡು ತನಿಖೆ ಮಾಡಬೇಕು ಎಂದರು.

5 ಲಕ್ಷ ಪರಿಹಾರ ನೀಡಬೇಕು: ಕೋವಿಡ್ ಸಮಯದಲ್ಲಿ ನಾನು ಸಿದ್ದರಾಮಯ್ಯನವರು ಸೇರಿದಂತೆ ಅನೇಕ ನಾಯಕರು ರಾಜ್ಯದಲ್ಲಿ ನಾಲ್ಕೂವರೆ ಲಕ್ಷ ಜನ ಸತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದೆವು. ನನ್ನ ತಾಲೂಕಿನಲ್ಲಿ ಸುಮಾರು 400 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಆದರೆ ಸರ್ಕಾರ ಮಾತ್ರ ಕೇವಲ 100 ಜನ ಸತ್ತಿದ್ದಾರೆ ಎಂದು ತಿಳಿಸಿತ್ತು. ನಾನು ಸಭೆ ಮಾಡಿ ಚರ್ಚಿಸಿ ಯಾರೆಲ್ಲ ಸತ್ತಿದ್ದಾರೆ ಅವರಿಗೆ ಪರಿಹಾರ ನೀಡುವಂತೆ ಅರ್ಜಿ ಹಾಕಲು ಅವಕಾಶ ನೀಡಿ ಎಂದು ತಿಳಿಸಿದ್ದೆ. ಸುಮಾರು ಮುನ್ನೂರಕ್ಕೂ ಹೆಚ್ಚು ಜನ ಪರಿಹಾರಕ್ಕೆ ಅರ್ಜಿ ಹಾಕಿದ್ದು, ಅದನ್ನು ಮಾನ್ಯ ಮಾಡಿದ್ದಾರೆ. ಆದರೆ ಇದುವರೆಗೂ ಕೋವಿಡ್ ದಿಂದ ಸತ್ತವರಿಗೆ ಸರ್ಕಾರ ಪರಿಹಾರ ನೀಡಿಲ್ಲ. ಚಾಮರಾಜನಗರ ದುರಂತದ ನಂತರ ನಾವು ಸದನದ ಒಳಗೆ ಹಾಗೂ ಹೊರಗೆ ರಾಜ್ಯದಲ್ಲಿ ಸುಮಾರು ನಾಲ್ಕುವರೆ ಲಕ್ಷ ಜನ ಕೊರೊನಾದಿಂದ ಸತ್ತಿದ್ದಾರೆ ಎಂದು ಮಾಹಿತಿ ನೀಡಿದ್ದೆವು. ಆದರೆ ಈಗ ದೇಶದಲ್ಲಿ ಕೊರೊನಾದಿಂದ 47 ಲಕ್ಷ ಜನ ಸತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ. ಕೊರೋನಾದಿಂದ ಮೃತಪಟ್ಟವರಿಗೆ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶ ನೀಡಿದೆ. ಇದು ಸರ್ಕಾರದ ಜವಾಬ್ದಾರಿಯೂ ಆಗಿದೆ ಎಂದರು.

ಇದನ್ನೂ ಓದಿ:ಅನಂತ್ ಕುಮಾರ್ ರಿಂದ ಬಹಳ ಪ್ರಭಾವಿತನಾಗಿದ್ದೆ: ರಾಜ್ಯಪಾಲ ಗೆಹ್ಲೋಟ್

Advertisement

ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ, ದೀಪಹಚ್ಚಿ ಎಂದಿತು. ಎಲ್ಲಾ ರೀತಿಯಲ್ಲೂ ನಾವು ಅವರಿಗೆ ಸಹಕಾರ ನೀಡಿದ್ದೇವೆ. ಕೊರೋನಾದಿಂದ ಸತ್ತವರಿಗೆ ಪರಿಹಾರ ನೀಡುವುದಾಗಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರೇ ಸದನದಲ್ಲಿ ಮಾತು ಕೊಟ್ಟಿದ್ದರು. ಆದರೆ ಇದುವರೆಗೂ ಇವರ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ. ಇನ್ನು ಆರೋಗ್ಯ ಸಚಿವರು ಸತ್ತವರ ಲೆಕ್ಕವನ್ನು ಮುಚ್ಚಿಡುತ್ತಿದ್ದಾರೆ. ಈ ಕೂಡಲೇ ಮುಖ್ಯಮಂತ್ರಿಗಳು ಮತ್ತೊಂದು ಸಭೆ ಕರೆದು ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು. ಮುಖ್ಯಮಂತ್ರಿಗಳು ಬೇಕಾದರೆ ಅವರ ಹಾಗೂ ಮಾಜಿ ಮುಖ್ಯಮಂತ್ರಿಗಳ ಫೋಟೋವನ್ನು ಹಾಕಿಕೊಂಡು ಸತ್ತವರಿಗೆ ಮರಣ ಪ್ರಮಾಣಪತ್ರವನ್ನು ನೀಡಲಿ. ಸರ್ಕಾರ ಕೂಡಲೇ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next