ಮಂಗಳೂರು: ವಿಟ್ಲ ಕನ್ಯಾನದಲ್ಲಿ ನಡೆದ ಅಪ್ರಾಪ್ತ ವಯಸ್ಸಿನ ಬಾಲಕಿಯ ಸಾವಿನ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು, ಆರೋಪಿಗೆ ಕಠಿನ ಶಿಕ್ಷೆ ವಿಧಿಸಬೇಕು, ಲವ್ ಜೆಹಾದ್ ತಡೆಗೆ ಕಾಯಿದೆ ಜಾರಿಗೆ ತರಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ನೇತೃತ್ವದಲ್ಲಿ ಸೋಮವಾರ ನಗರದ ಮಲ್ಲಿಕಟ್ಟೆಯಲ್ಲಿ ಪ್ರತಿಭಟನೆ ನಡೆಯಿತು.
ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಮಾತನಾಡಿ, ಅತ್ಯಾಚಾರವೆಸಗಿ ಕೊಲೆ ಮಾಡಿರುವ ಸಂಶಯವಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಪ್ರೀತಿ ಪ್ರೇಮದ ನಾಟಕವಾಡಿ ಬಾಲಕಿಯನ್ನು ಬಲಿ ಪಡೆದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಬಾಲಕಿಯ ಕುಟುಂಬಿಕರಿಗೆ 10 ಲ.ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ಮಾತನಾಡಿ, ಕರಾವಳಿಯಲ್ಲಿ ಯುವತಿಯರ ನಾಪತ್ತೆ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಕಾರ್ಪೊರೇಟರ್‌ಗಳಾದ ಕಿರಣ್ ಕುಮಾರ್, ಜಯಲಕ್ಷ್ಮೀ ಶೆಟ್ಟಿ, ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ವಿಭಾಗ ಸಂಚಾಲಕ ಭುಜಂಗ ಕುಲಾಲ್, ಗೋರಕ್ಷಾ ಪ್ರಮುಖ್ ಪ್ರದೀಪ್ ಪಂಪ್‌ವೆಲ್ ಪಾಲ್ಗೊಂಡಿದ್ದರು.