Advertisement

ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಿದ್ರೆ ಕ್ರಮ

04:23 PM May 07, 2021 | Team Udayavani |

ಬೀದರ : ಯಾವುದೇ ರಸಗೊಬ್ಬರ ಮಾರಾಟಗಾರರು ಗರಿಷ್ಠ ಮಾರಾಟದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್‌ ಹೇಳಿದರು.

Advertisement

ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ಕುರಿತಂತೆ ನಗರದ ಕೃಷಿ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಏಪ್ರಿಲ್‌ ತಿಂಗಳಲ್ಲಿ ರಸಗೊಬ್ಬರ ದರ ಏರಿಕೆಯಾಗಿದ್ದು, ಮಾರ್ಚ್‌ವರೆಗೆ ಹೊಂದಿರುವ ದಾಸ್ತಾನು ಪರಿಷ್ಕೃತ ದರ ಬದಲಾಗಿ ಹಳೆಯ ದರದಲ್ಲಿಯೇ ಮಾರಾಟ ಮಾಡಬೇಕಾಗಿರುತ್ತದೆ.

ರೈತರು ರಸಗೊಬ್ಬರ ಖರೀದಿಸುವಾಗ ಕಡ್ಡಾಯವಾಗಿ ಗರಿಷ್ಠ ಮಾರಾಟ ದರ ಚೀಲದ ಮೇಲೆ ನೋಡಿ ಖರೀದಿಸಬೇಕು. ಹೆಚ್ಚಿನ ದರದಲ್ಲಿ ಮಾರುವವರ ವಿರುದ್ಧ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ದೂರು ಸಲ್ಲಿಸಬಹುದು ಎಂದರು. ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಪಾಯಿಂಟ್‌ ಆಫ್‌ ಸೆಲ್‌ ಮುಖಾಂತರವೇ ಹಾಗೂ ಹಳೆಯ ದರದಲ್ಲಿಯೇ ಹಳೆಯ ದಾಸ್ತಾನನ್ನು ಆದ್ಯತೆ ಮೇಲೆ ಮಾರಾಟ ಮಾಡಬೇಕು. ಮಾರಾಟ ಮಳಿಗೆಯಲ್ಲಿ ದರ ಪಟ್ಟಿ ಹಾಗೂ ದಾಸ್ತಾನು ಪ್ರದರ್ಶಿಸಬೇಕು. ಅದೇ ರೀತಿಯಾಗಿ ನಗದು ರಹಿತ ಪಾವತೀಕರಣ ವ್ಯವಸ್ಥೆ ಕಡ್ಡಾಯವಾಗಿ ಅನುಷ್ಠಾನಗೊಳಿಸಿ, ರೈತರಿಂದ ನಗದು ರಹಿತ ಡಿಜಿಟಲ್‌ ಪಾವತೀಕರಣದ ಮುಖಾಂತರ ವ್ಯವಹಾರ ಮಾಡಬೇಕೆಂದು ತಿಳಿಸಿದರು.

ರೈತರು ಬಿತ್ತನೆ ಬೀಜ ರಸಗೊಬ್ಬರ, ಕೀಟನಾಶಕಗಳು ಕಳಪೆ ಮಟ್ಟವೆಂದು ಕಂಡು ಬಂದಲ್ಲಿ ಗ್ರಾಹಕರ ವೇದಿಕೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ರಶೀದಿಗಳು ಕಡ್ಡಾಯವಾಗಿ ಹಾಜರು ಪಡಿಸಬೇಕಾಗಿರುತ್ತದೆ. ಆದ್ದರಿಂದ ಯಾವುದೇ ಕೃಷಿ ಪರಿಕರ ಖರೀದಿಸುವಾಗ ಕಡ್ಡಾಯವಾಗಿ ರಶೀದಿ ಪಡೆದುಕೊಳ್ಳತಕ್ಕದ್ದು ಹಾಗೂ ಗರಿಷ್ಠ ಮಾರಾಟ ಬೆಲೆಯನ್ನು ನೋಡಿಯೆ ಖರೀದಿಸಬೇಕು ಎಂದು ಹೇಳಿದರು.

ಈಗಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುವ ಲಘು ಪೋಷಕಾಂಶಗಳು, ಸಾವಯವ ಗೊಬ್ಬರ, ಸಸ್ಯ ಸಂರಕ್ಷಣ ಔಷಧಿಗಳು, ಸ್ಪ್ರೆàಯರ್‌ ಮುಂತಾದ ಪರಿಕರಗಳನ್ನು ರೈತ ಬಾಂಧವರು ರಿಯಾಯಿತಿ ದರದಲ್ಲಿ ಖರೀದಿಸಬೇಕು. ಯಾವುದೇ ರೀತಿಯ ತಾಂತ್ರಿಕ ಮಾಹಿತಿಗಾಗಿ ಜನವಾಡಾದ ಕೆವಿಕೆ, ಹಳ್ಳದಕೇರಿಯ ಕೃಷಿ ಸಂಶೋಧನಾ ಕೇಂದ್ರ, ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಹಿರಿಯ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ಇದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next