ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆಯಿಂದ (ರೇರಾ) ವಿನಾಯಿತಿ ನೀಡಲು ನಿರ್ದೇಶಿಸುವಂತೆ ಕೋರಿ ಗೃಹ ಹಾಗೂ ನಿವೇಶನ ನಿರ್ಮಾಣ ಸಹಕಾರ ಸಂಘಗಳು ಹೈಕೋರ್ಟ್ ಮೊರೆ ಹೋಗಿವೆ.
ಬಿಎಸ್‌ಎನ್‌ಎಲ್ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಹಾಲಿ /ನಿವೃತ್ತ ಉದ್ಯೋಗಿಗಳ ಗೃಹ ನಿರ್ಮಾಣ ಸಹಕಾರ ಸಂಘ ಸೇರಿದಂತೆ ಒಂಬತ್ತು ಸಹಕಾರ ಸಂಘಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಅವರಿದ್ದ ಏಕಸದಸ್ಯ ಪೀಠ, ಪ್ರತಿವಾದಿಗಳಾದ ಕೇಂದ್ರ ಕಾನೂನು ಇಲಾಖೆ ಕಾರ್ಯದರ್ಶಿ, ಕೇಂದ್ರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ರಾಜ್ಯಸರ್ಕಾರದ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟೀಸ್ ಜಾರಿಗೊಳಿಸಿದೆ.
ರೇರಾ ಕಾಯಿದೆಯ ನಿಯಮಗಳು ಸಹಕಾರ ಸಂಘಗಳಿಗೆ ಅನ್ವಯಿಸಿರುವುದು ಸಂವಿಧಾನ ಬಾಹಿರ. ಸಹಕಾರ ಸಂಘಗಳು ಲಾಭ ರಹಿತವಾಗಿ ಬಡಾವಣೆ ರಚಿಸಿ ತನ್ನ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲಿವೆ. ಇದರಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಮೀಸಲಾತಿಯೂ ಸೇರಲಿದೆ.
ಜೊತೆಗೆ ರೇರಾ ಕಾಯಿದೆಯಲ್ಲಿನ ಕೆಲ ಅಂಶಗಳು ಸಹಕಾರ ಸಂಘಗಳ ಕಾಯಿದೆ 1959ರ ಕಲಂ 70ಕ್ಕೆ ವಿರುದ್ಧವಾಗಿವೆ. ಹೀಗಾಗಿ ಸಹಕಾರ ಸಂಘಗಳಿಗೆ ರೇರಾ ಕಾಯಿದೆಯಿಂದ ವಿನಾಯಿತಿ ನೀಡಬೇಕು ಹಾಗೂ ಅರ್ಜಿ ಇತ್ಯರ್ಥವಾಗುವ ತನಕ ರೇರಾ ಕಾಯಿದೆ ಜಾರಿಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂಬುದು ಅರ್ಜಿದಾರರ ವಾದವಾಗಿದೆ.
ರಿಟ್ ಅರ್ಜಿ ಸಲ್ಲಿಸಿರುವವರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉದ್ಯೋಗಿಗಳ ಕೋ ಆಪರೇಟಿವ್ ಸೊಸೈಟಿ, ರೈಲ್ವೆ ಉದ್ಯೋಗಿಗಳ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ, ಸಹಕಾರ ನಗರ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ ಸೇರಿವೆ. ಕೇಂದ್ರ ಸರ್ಕಾರ ಕಳೆದ ವರ್ಷ ಜಾರಿಗೊಳಿಸಿದ್ದ ರೇರಾ ಕಾಯಿದೆಗೆ ನಿಯಮಾವಳಿ ರೂಪಿಸಿ ಜುಲೈ 11 ರಂದು ರಾಜ್ಯಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಕಾವೇರಿ ಭವನದಲ್ಲಿ ಪ್ರಾಧಿಕಾರದ ಕಚೇರಿ ಸಹ ತೆರೆದಿತ್ತು.