ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳು, ಪತ್ರಿಕಾ ವಿತರಕರು ಹಾಗೂ ಏಜೆಂಟರು ಕೋವಿಡ್-19ಕ್ಕೆ ತುತ್ತಾಗಿ ಸಾವಿಗೀಡಾದರೆ ಅಂತಹವರಿಗೆ 50 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಅವರನ್ನೂ ಕೋವಿಡ್-19 ಪರಿಹಾರ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಕೋರಿ ಸಲ್ಲಿಸಿರುವ ಮನವಿ ಪತ್ರವನ್ನು ಎರಡು ತಿಂಗಳಲ್ಲಿ ಪರಿಗಣಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತು ಕೋರಮಂಗಲದ ಜಾಕೊಬ್ ಜಾರ್ಜ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ವಿ.ನಾಗರತ್ನ ಮತ್ತು ನ್ಯಾ. ಸೂರಜ್ ಗೋವಿಂದ ರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಈ ಸೂಚನೆ ನೀಡಿತು. ಅಲ್ಲದೆ, ಕೋವಿಡ್-19 ಪರಿಹಾರ ಯೋಜನೆ ವ್ಯಾಪ್ತಿಗೆ ಮಾಧ್ಯಮದ ಪ್ರತಿನಿಧಿಗಳನ್ನು ತುರುವ ಅಥವಾ ಅವರಿಗಾಗಿ ಪ್ರತ್ಯೇಕ ಯಾವುದಾದರೂ ವಿಮಾ ಯೋಜನೆ ರೂಪಿಸಲು ಸಾಧ್ಯವೇ? ಎಂಬುದರ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಧ್ಯಮ ಸಂಸ್ಥೆಗಳ ಜೊತೆ ಮುಕ್ತ ಚರ್ಚೆ ನಡೆಸಬೇಕು.
ಎಂಬ ಬಗ್ಗೆ ಪರಾಮರ್ಷೆ ನಡೆಸಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಚ್. ಸುನೀಲ್ ಕುಮಾರ್, ಸಂವಿಧಾನದ 21ನೇ ವಿಧಿಯ ಅನುಸಾರ ಎಲ್ಲ ನಾಗರಿಕರ ಜೀವರಕ್ಷಣೆಯ ಹೊಣೆ ಸರ್ಕಾರದ್ದಾಗಿದೆ. ಕೋವಿಡ್ -19 ತುರ್ತು ಪರಿಸ್ಥಿತಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕಂಟೈನ್ಮೆಂಟ್ ವಲಯಗಳಿಗೆ ಭೇಟಿ ನೀಡಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಮಾಧ್ಯಮ ಪ್ರತಿನಿಧಿಗಳನ್ನು ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆ’ ವ್ಯಾಪ್ತಿಗೆ ಸೇರಿಸಬೇಕು. ಅವರಿಗೆ ಸರ್ಕಾರದ ವತಿಯಿಂದ 50 ಲಕ್ಷ ರೂ. ಪರಿಹಾರ ಘೋಷಿಸಬೇಕು.
ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಮಾಧ್ಯಮ ಪ್ರತಿನಿಧಿಗಳು ಜನರಿಗೆ ಮಾಹಿತಿ ನೀಡುತ್ತಾರೆ. ಆದ್ದರಿಂದ ಅವರಿಗೆ ಪರಿಹಾರ ಘೋಷಿಸಲು ಕೋರಿ ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಎರಡು ತಿಂಗಳಲ್ಲಿ ಪರಿಗಣಿಸಬೇಕು. ಅವರನ್ನೂ ಯಾವುದಾದರೂ ವಿಮಾ ವ್ಯಾಪ್ತಿಗೆ ಒಳಪಡಿಸಬಹುದೇ ಎಂಬುದನ್ನು ಸರ್ಕಾರ ಪರಾಮರ್ಷೆ ನಡೆಸಲಿ ಎಂದು ಸೂಚಿಸಿತು.