Advertisement

ಅಧಿಕ ವಿದ್ಯುತ್‌ ಬಿಲ್‌: ಸ್ಪಂದಿಸಲು ಮೆಸ್ಕಾಂಗೆ ಮನವಿ

10:55 PM May 28, 2020 | Team Udayavani |

ಬ್ರಹ್ಮಾವರ: ಜನರು ಕೋವಿಡ್‌-19 ದಿಂದ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ವಿದ್ಯುತ್‌ ಬಳಕೆದಾರರಿಂದ ಮೆಸ್ಕಾಂ ಅಧಿಕ ಹಣ ವಸೂಲಿ ಮಾಡುತ್ತಿದ್ದು, ತತ್‌ಕ್ಷಣ ಸ್ಪಂದಿಸಬೇಕಾಗಿ ಗುರುವಾರ ಮನವಿ ಸಲ್ಲಿಸಲಾಯಿತು.

Advertisement

3 ತಿಂಗಳ ಒಟ್ಟು ಬಿಲ್‌ ಬರುವಾಗ ನಿಗದಿತ ದರಕ್ಕಿಂತ ವಿಪರೀತ ಹೆಚ್ಚುವರಿ ಬಿಲ್‌ ವಿಧಿಸಲಾಗುತ್ತಿದೆ. ಅಲ್ಲದೆ ಹಲವು ಪ್ರತ್ಯೇಕ ಹಣ ಸೇರಿಸಲಾಗುತ್ತಿದೆ. ಇದು ಹಗಲು ದರೋಡೆಯಾಗಿದೆ. ಮೆಸ್ಕಾಂ ತತ್‌ಕ್ಷಣ ಈ ಕುರಿತು ಸ್ಪಂದಿಸ ಬೇಕಾಗಿ ಹೇರೂರು ನಾಗರಿಕ ಹೋರಾಟ ಸಮಿತಿ ಹಾಗೂ ವಿದ್ಯುತ್‌ ಬಳಕೆದಾರರು ಬ್ರಹ್ಮಾವರ ಶಾಖೆಯ ಮೂಲಕ ಮನವಿ ಮಾಡಿದರು.

ಜತೆಗೆ ವಿದ್ಯುತ್‌ ಬಿಲ್‌ ಕನ್ನಡದಲ್ಲಿ ಮುದ್ರಣಗೊಳ್ಳಬೇಕು. ಅಕ್ಷರಗಳನ್ನು ಸ್ಪಷ್ಟವಾಗಿ ಮುದ್ರಿಸಬೇಕು. ಇದರಿಂದ ಗ್ರಾಮೀಣ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎನ್ನುವುದನ್ನು ಮನವರಿಕೆ ಮಾಡಲಾಯಿತು.

ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಬಾರಕೂರು ಸತೀಶ್‌ ಪೂಜಾರಿ, ಹೇರೂರು ನಾಗರಿಕ ಹೋರಾಟ ಸಮಿತಿಯ ಸದಾಶಿವ ಶೆಟ್ಟಿ, ಪ್ರಮುಖರಾದ ಅರುಣ್‌ ಕುಮಾರ್‌, ಅರುಣ್‌ ಭಂಡಾರಿ, ಮೋಹನ್‌ ಶೆಟ್ಟಿ, ಅಲ್ತಾಫ್‌ ಅಹಮದ್‌, ವಿಶ್ವನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಅಧಿಕ ದರ ವಿಧಿಸಿಲ್ಲ
ಲಾಕ್‌ಡೌನ್‌ನಿಂದ ಮೀಟರ್‌ ರೀಡಿಂಗ್‌ ಆಗದ ಸಂದರ್ಭ ಡಿಸೆಂಬರ್‌, ಜನವರಿ, ಫೆಬ್ರವರಿಯ ಸರಾಸರಿ ಬಳಕೆಯನ್ನು ಆಧರಿಸಿ ಎಸ್‌.ಎಂ.ಎಸ್‌. ಮೂಲಕ ಮೊತ್ತವನ್ನು ತಿಳಿಸಲಾಗಿತ್ತು. ಆದರೆ ಆ ಸಮಯದ ಬಳಕೆಗೂ ಈಗಿನ ಮಾರ್ಚ್‌, ಎಪ್ರಿಲ್‌, ಮೇ ತಿಂಗಳ ಬಳಕೆಗೂ ಬಹಳಷ್ಟು ವ್ಯತ್ಯಾಸವಿದೆ. ಜನರೆಲ್ಲರೂ ಮನೆಯಲ್ಲಿ ಇದ್ದ ಕಾರಣ ವಿದ್ಯುತ್‌ ಬಳಕೆ ಸಹಜವಾಗಿ ಬಹಳಷ್ಟು ಹೆಚ್ಚಿದೆ. ಆದ್ದರಿಂದ ನಿಜವಾಗಿ ಬಿಲ್‌ ಜನರೇಟ್‌ ಆಗುವಾಗ ಹೆಚ್ಚಿನ ಮೊತ್ತ ಬಂದಿದೆ. ಹೊರತಾಗಿ ಯಾವುದೇ ಅಧಿಕ ಹಣ ವಸೂಲಿ ಮಾಡಿಲ್ಲ. ಫಿಕ್ಸೆಡ್‌ ಚಾರ್ಜ್‌, ಸ್ಲ್ಯಾಬ್‌ ಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಶಾಂತ್‌ ಪುತ್ರನ್‌ ಅವರು ಸ್ಪಷ್ಟಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next