ಶಿವಮೊಗ್ಗ: ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಹೈಡ್ರಾಮಗಳಿಗೆ ಕಾರಣವಾಗಿದೆ. ಶಿಷ್ಟಾಚಾರ ಉಲ್ಲಂಘನೆ ವಿರೋಧಿಸಿ ಎಂಎಲ್ ಸಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಆಗಮಿಸಿದ್ದರು. ರೈಲ್ವೇ ಮೇಲ್ಸೇತುವೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ನೂತನ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಎಂಎಲ್ ಸಿ ಆರ್.ಪ್ರಸನ್ನ ಕುಮಾರ್ ಹಾಗೂ ಸ್ಥಳೀಯ ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡರಿಗೆ ಅಧಿಕಾರಿಗಳು ಆಹ್ವಾನ ನೀಡಿರಲಿಲ್ಲ.
ಇದನ್ನೂ ಓದಿ:ವಿಜಯಪುರದ ಭೂಕಂಪದ ಸದ್ದು, ಶ್ವಾನ ರೋಧನ ಸಿಸಿ ಕ್ಯಾಮರಾದಲ್ಲಿ ದಾಖಲು: ವಿಡಿಯೋ ವೈರಲ್
ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆಗೆ ಧಿಕ್ಕಾರ ಕೂಗಿ, ಕಪ್ಪುಪಟ್ಟಿ ಪ್ರದರ್ಶಿಸಿದರು. ಜೊತೆಗೆ ಸಭಾ ಕಾರ್ಯಕ್ರಮದ ವೇದಿಕೆಯ ಮುಂದೆಯೂ ಪ್ರತಿಭಟಿಸಿದರು.
ಕೈ ಕಾರ್ಯಕರ್ತರ ವಿರುದ್ಧವಾಗಿ ಬಿಜೆಪಿ ಕಾರ್ಯಕರ್ತರಿಂದಲೂ ಭಾರತ್ ಮಾತಾಕೀ ಜೈ, ಮೋದಿ ಪರ ಘೋಷಣೆ ಕೇಳಿಬಂತು. ಮಧ್ಯ ಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ಕರೆದೊಯ್ದರು.
ಮತ್ತೆ ನಾಟಕೀಯ ಬೆಳವಣಿಗೆ: ಬಳಿಕ ವೇದಿಕೆ ಮೇಲೆಯೂ ನಾಟಕೀಯ ಬೆಳವಣಿಗೆ ನಡೆಯಿತು. ಕಾರ್ಯಕ್ರಮ ಹಾಳು ಮಾಡಿ ವೇದಿಕೆ ಮೇಲೆ ಬಂದು ಕೂತಿದ್ದಿರಾ ಎಂದು ಎಂ.ಎಲ್.ಸಿ. ಪ್ರಸನ್ನ ಕುಮಾರ್ ವಿರುದ್ಧ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್. ಚೆನ್ನಬಸಪ್ಪ ಹರಿಹಾಯ್ದರು.
ಈ ವೇಳೆ ಮತ್ತೆ ಕೆರಳಿದ ಕಾಂಗ್ರೆಸ್ ಎಂಎಲ್ ಸಿ ಆರ್.ಪ್ರಸನ್ನ ಕುಮಾರ್ ಮತ್ತು ಚೆನ್ನಬಸಪ್ಪ ನಡುವೆ ವೇದಿಕೆಯಲ್ಲೆ ವಾಗ್ವಾದ ನಡೆಯಿತು. ಈ ವೇಳೆ ಪ್ರಸನ್ನ ಕುಮಾರ್ ವೇದಿಕೆ ಬಿಟ್ಟು ಕೆಳಗಿಳಿದು ಹೋದರು. ಮಧ್ಯಪ್ರವೇಶಿಸಿದ ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ ಅವರು ಪ್ರಸನ್ನ ಕುಮಾರ್ ಮನವೊಲಿಸಿ ಮತ್ತೆ ವೇದಿಕೆ ಮೇಲೆ ಕುಳಿತುಕೊಳ್ಳುವಂತೆ ಮಾಡಿದರು.