ಬೆಂಗಳೂರು: ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ರಚಿಸಿರುವ “ಬಹುಶಿಸ್ತೀಯ ತನಿಖಾ ತಂಡ’ (ಎಂಡಿಐಟಿ) “ಕರ್ನಾಟಕ ಹಣ ಕಾಸು ಸಂಸ್ಥೆಗಳಲ್ಲಿನ ಹೂಡಿಕೆದಾರರ ಹಿತರಕ್ಷಣಾ ಕಾಯ್ದೆ-2004 (ಕೆಪಿಐಡಿ)ರಡಿ ತನಿಖೆ ಮುಂದುವರಿಸಿ, ಆದಷ್ಟು ಬೇಗ ಅಧಿ ಸೂಚನೆ ಹೊರಡಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಅಲ್ಲದೇ ಭ್ರಷ್ಟಾಚಾರ ನಿಯಂತ್ರಣ (ತಿದ್ದುಪಡಿ) ಕಾಯ್ದೆ-2018ರ ಪ್ರಕಾರ “ಸಾರ್ವಜನಿಕ ಸೇವಕರನ್ನು’ (ಸರ್ಕಾರಿ ಅಧಿಕಾರಿಗಳು) ಪ್ರಾಸಿಕ್ಯೂಷನ್‌ಗೆ ಒಳ ಪಡಿಸಲು ಪೂರ್ವಾನುಮತಿ ನೀಡುವ ಬಗ್ಗೆಯೂ ತಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಐಎಂಎ ಬಹುಕೋಟಿ ವಂಚನೆ ಪ್ರಕ ರಣವನ್ನು ಸಿಬಿಐ ತನಿಖೆಗೆ ಒಪ್ಪಿಸ ಬೇಕೆಂದು ಕೋರಿ ಸಲ್ಲಿಸಲಾದ ಹಲವು ಅರ್ಜಿಗಳನ್ನು ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಸಂಸ್ಥೆಯ ಚರಾಸ್ತಿ ಹಾಗೂ ಸ್ಥಿರಾಸ್ಥಿ ಜಪ್ತಿ ಮಾಡಿಕೊಳ್ಳಲು ನೇಮಿಸ ಲಾಗಿರುವ ಸಕ್ಷಮ ಪ್ರಾಧಿಕಾರಿ, ವಿಶೇಷ ತನಿಖಾ ತಂಡ ಹಾಗೂ ಸಿಬಿಐ ರಚಿಸಿರುವ ಎಂಡಿಐಟಿ ನ್ಯಾಯಪೀಠಕ್ಕೆ ಅನುಪಾಲನಾ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದವು. ಅದರಂತೆ, ಆಸ್ತಿ ಜಪ್ತಿ ಪ್ರಕ್ರಿಯೆ, ಹೂಡಿಕೆದಾರರ ಮನವಿಗಳನ್ನು ವಿಲೇವಾರಿ ಮಾಡಲು 30 ಹುದ್ದೆಗಳನ್ನು ಭರ್ತಿ ಮಾಡುವಂತೆ ಸಕ್ಷಮ ಪ್ರಾಧಿಕಾರ ಸರ್ಕಾರಕ್ಕೆ ಮನವಿ ಮಾಡಿದ್ದು, ಆ ಪ್ರಕಾರ 5 ಹುದ್ದೆಗಳ ಭರ್ತಿಗೆ ಎರಡು ವಾರಗಳಲ್ಲಿ ಹಾಗೂ ಉಳಿದ 25 ಹುದ್ದೆಗಳ ಭರ್ತಿಗೆ ಆದ್ಯತೆ ಮೇಲೆ ಕ್ರಮ ಕೈಗೊಳ್ಳಬೇಕು ಪೀಠ ಸೂಚಿಸಿತು.
ಇದೇ ವೇಳೆ ಆಸ್ತಿ ಜಪ್ತಿ ಪ್ರಕ್ರಿಯೆ ಪ್ರಗತಿ ವರದಿ ಸಲ್ಲಿಸುವಂತೆ ಸಕ್ಷಮ ಪ್ರಾಧಿಕಾರಿಗೆ ಸೂಚನೆ ನೀಡಿದ ನ್ಯಾಯಪೀಠ, ಪ್ರಕರಣದ ಸಮಗ್ರ ತನಿಖಾ ಪ್ರಗತಿ ವರದಿಯನ್ನು ಸೆ.18ರೊಳಗೆ ಸಲ್ಲಿಸುವಂತೆ ಸಿಬಿಐ ಹಾಗೂ ಎಸ್‌ಐಟಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.
ರೋಷನ್ ಬೇಗ್ ಹೆಸರು ಪ್ರಸ್ತಾಪ: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರೊಬ್ಬರು ಮಾಜಿ ಸಚಿವ ರೋಷನ್‌ಬೇಗ್ ಹೆಸರು ಪ್ರಸ್ತಾಪಿಸಿ, ಅವರಿಗೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗಿಲ್ಲ ಎಂದು ದೂರಿದರು. ಅದಕ್ಕೆ ಸಿಬಿಐ ಪರ ವಕೀಲ ಪ್ರಸನ್ನಕುಮಾರ್ ಪ್ರತಿಕ್ರಿಯಿಸಿ, ಜನಪ್ರತಿನಿಧಿಗಳ ವಿರುದ್ಧ ಎರಡು ಎಫ್ಐಆರ್ ದಾಖಲಿಸಲಾಗಿದೆ. ಆ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ ಎಂದು ಹೇಳಿದರು. ಸಿಬಿಐ ತನಿಖೆ ಸಮರ್ಪಕವಾಗಿ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ನ್ಯಾಯಪೀಠ ಹೇಳಿತು.