ಚೆನ್ನೈ: ಬಹುಶಃ ನಮ್ಮ ಸಂವಿಧಾನಕ್ಕೆ ತಿದ್ದುಪಡಿ ತಂದು, “ದೇಶದ ಎಲ್ಲ ನಾಗರಿಕರಿಗೂ ನಗುವ ಹಕ್ಕು ಹಾಗೂ ಹಾಸ್ಯಮಯ ಪ್ರವೃತ್ತಿ ಹೊಂದುವ ಹಕ್ಕು ಇದೆ’ ಎಂಬುದನ್ನು ಸೇರಿಸುವ ಸಮಯ ಬಂದಿದೆ. “ಪದಗಳಲ್ಲೇ ಜೋಕ್’ ಮಾಡಿದ ವ್ಯಕ್ತಿಯೊಬ್ಬರ ಮೇಲೆ ತಮಿಳುನಾಡು ಪೊಲೀಸರು ದಾಖಲಿಸಿದ್ದ ಕೇಸನ್ನು ವಜಾ ಮಾಡುವ ವೇಳೆ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ಆಡಿದ ಮಾತಿದು.
ಅರ್ಜಿದಾರ ಮಥಿವಣ್ಣನ್ ಇತ್ತೀಚೆಗೆ ಪುತ್ರಿ ಮತ್ತು ಅಳಿಯನೊಂದಿಗೆ ತಿರುಮಲೈ ಬೆಟ್ಟಕ್ಕೆ ಪ್ರವಾಸ ಹೋಗಿದ್ದರು. ಬಂದ ಮೇಲೆ ಫೇಸ್‌ಬುಕ್‌ನಲ್ಲಿ ಫೋಟೋ ಅಪ್‌ಲೋಡ್ ಮಾಡಿ, “ಶೂಟಿಂಗ್ ಅಭ್ಯಾಸಕ್ಕಾಗಿ ಸಿರುಮಲೈಗೆ ಪ್ರವಾಸ’ ಎಂದು ಬರೆದುಕೊಂಡಿದ್ದರು. ಕೂಡಲೇ ಅವರ ವಿರುದ್ಧ ಪೊಲೀಸರು, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ, ದೇಶದ ವಿರುದ್ಧ ಯುದ್ಧ ಸಾರಿರುವುದು ಸೇರಿದಂತೆ ಹಲವು ಸೆಕ್ಷನ್‌ಗಳಡಿ ಕೇಸು ದಾಖಲಿಸಿದ್ದರು.
ಇದನ್ನೂ ಓದಿ:ಪಾದೂರು ಐ.ಎಸ್.ಪಿ.ಆರ್.ಎಲ್ 2ನೇ ಹಂತದ ಯೋಜನೆಯ ಜೆಎಂಸಿ ಸರ್ವೇಗೆ ಸ್ಥಳೀಯರಿಂದ ತಡೆ
ವಿಚಾರಣೆ ನಡೆಸಿದ ಹೈಕೋರ್ಟ್, “ಆರೋಪಿ ಮಾಡಿರುವ ತಮಾಷೆಯನ್ನೇ ನೀವು ಗಂಭೀರವಾಗಿ ತೆಗೆದು ಕೊಂಡಿದ್ದೀರಿ. ಹೀಗಾದರೆ, ಸಂವಿಧಾನದಲ್ಲಿ ನಗುವ ಮತ್ತು ತಮಾಷೆ ಮಾಡುವ ಹಕ್ಕನ್ನೂ ಸೇರಿಸಬೇಕಾಗಬಹುದು. ಈ ಎಫ್ಐಆರ್ ಅಸಂಬದ್ಧ’ ಎಂದು ಹೇಳಿ ಅದನ್ನು ವಜಾ ಮಾಡಿತು.