ಬೆಂಗಳೂರು: ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ತೀರ್ಪು ರಾಜ್ಯ ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಮುಂದಿನ ನಡೆ ಏನೆಂಬುದರ ವಿಚಾರದಲ್ಲಿ ಗೊಂದಲದಲ್ಲಿ ಮುಳುಗಿದ್ದಾರೆ.
ಹಿಜಾಬ್ ವಿವಾದ ಆರಂಭವಾದ ಕ್ಷಣದಿಂದಲೂ ಕಾಂಗ್ರೆಸ್ ನಲ್ಲಿ ಎರಡು ಅಭಿಪ್ರಾಯ ವ್ಯಕ್ತವಾಗಿತ್ತು. ಈ ವಿಚಾರದಲ್ಲಿ ಯಾರೂ ಈ ಬಗ್ಗೆ ಮಾತನಾಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟವಾಗಿ ಸೂಚನೆ ನೀಡಿದ್ದರು. ಆದರೆ ಹಿಜಾಬ್ ಇಸ್ಲಾಮಿನ ಮೂಲಭೂತ ಹಕ್ಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದ್ದರು. ಹೀಗಾಗಿ ಕಾಂಗ್ರೆಸ್ ಈ ವಿಚಾರದಲ್ಲಿ ಮೊದಲಿನಿಂದಲೂ ದ್ವಂದ್ವ ನಿಲುವಿನಲ್ಲೇ ಇತ್ತು. ನ್ಯಾಯಾಲಯದ ಆದೇಶ ಪ್ರಕಟವಾದ ಬಳಿಕವೂ ಅದೇ ಗೊಂದಲ ಮುಂದುವರಿದಿದೆ.
ತೀರ್ಪಿನ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ನಾನು ಈ ಬಗ್ಗೆ ಯಾವುದೇ ವ್ಯಾಖ್ಯಾನ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಹೈಕೋರ್ಟ್ ತೀರ್ಪು ಕಾಂಗ್ರೆಸ್ ಗೆ ಕಪಾಳ ಮೋಕ್ಷವಲ್ಲ ಎಂದು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲಿನಿಂದಲೂ ಈ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದ್ದು ದಿಲ್ಲಿ ಪ್ರವಾಸದಲ್ಲಿ ಇರುವುದರಿಂದ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.
ಇದನ್ನೂ ಓದಿ:ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ: ಪ್ರಧಾನಿ ಮೋದಿ ಘೋಷಣೆ
ಮುಂದಿನ ಚುನಾವಣೆ ದೃಷ್ಟಿಯಿಂದಲೂ ಮುಸ್ಲಿಂ ಓಲೈಕೆ ವಿಚಾರದಲ್ಲಿ ಪಕ್ಷದ ನಿಲುವು ಏನಿರಬೇಕೆಂಬ ಬಗ್ಗೆ ಕಾಂಗ್ರೆಸ್ ನಲ್ಲಿ ಎರಡು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದರಿಂದ ಬಿಜೆಪಿ ಪರವಾಗಿ ಮತ ಕೇಂದ್ರೀಕೃತಗೊಳ್ಳುವುದರಿಂದ ಸೂಕ್ಷ್ಮ ವಿಚಾರಗಳ ಸಂದರ್ಭದಲ್ಲಿ ಕಾಂಗ್ರೆಸ್ ತಟಸ್ಥ ಧೋರಣೆ ಅನುಸರಿಸಬೇಕೆಂಬ ವಾದ ಈಗ ಕಾಂಗ್ರೆಸ್ ನಲ್ಲಿ ಬಲಗೊಳ್ಳುತ್ತಿದೆ.