ಬೆಂಗಳೂರು: ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ವಿಚಾರದಲ್ಲಿ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, “ಕಾನೂನುಬಾಹಿರ ಕಾರ್ಯಗಳನ್ನು ಬಿಬಿಎಂಪಿ ಎಷ್ಟೊಂದು ನಯ-ನಾಜೂಕಿನಿಂದ ಮಾಡುತ್ತಲ್ಲ’ ಎಂದು ಚಾಟಿ ಬೀಸಿದೆ.
ಬಿಬಿಎಂಪಿ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ನಿರ್ವಹಣೆಯಲ್ಲಿ ಪಾಲಿಕೆಯ ವೈಫಲ್ಯ ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ, ಬಿಬಿಎಂಪಿ ಕಾರ್ಯವೈಖರಿ ಮತ್ತು ಅದು ತೆಗೆದುಕೊಂಡ ನಿಲುವುಗಳ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಘನತ್ಯಾಜ್ಯ ವಿಲೇವಾರಿ ನಿರ್ವಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ನೀಡಿರುವ ಪ್ರಮಾಣಪತ್ರ, ವರದಿ ಮತ್ತು ಮಾಹಿತಿಗಳು ಒಂದಕ್ಕೊಂದು ತಾಳೆ ಆಗಿತ್ತಿಲ್ಲ. ಕಾನೂನುಬಾಹಿರ ಕಾರ್ಯಗಳನ್ನು ಬಿಬಿಎಂಪಿ ಎಷ್ಟೊಂದು ನಯ-ನಾಜೂಕಿನಿಂದ ಮತ್ತು ಸೊಗಸಾಗಿ ನಡೆಸುತ್ತಿದ್ದೆಯಲ್ಲ ಎಂದು ಬಿಬಿಎಂಪಿ ಪರ ವಕೀಲರನ್ನು ತೀಕ್ಷ್ಣವಾಗಿ ಕೇಳಿತು.
ಸದಸ್ಯರನ್ನು ವಜಾಗೊಳಿಸಿ: ಇದಕ್ಕೂ ಮೊದಲು ಅರ್ಜಿದಾರರ ವಕೀಲರು ವಾದ ಮಂಡಿಸಿ, ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಪಾಲಿಕೆಯ ಬಜೆಟ್‌ನಲ್ಲಿ ಸಾವಿರಾರು ಕೋಟಿ ರೂ. ಹಣ ಮೀಸಲಿರಿಸಲಾಗಿದೆ. ಆದರೆ, ಆ ಹಣವನ್ನು ಪಾಲಿಕೆ ಸದಸ್ಯರು ಮತ್ತು ಗುತ್ತಿಗೆದಾರರು ಶಾಮೀಲಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿಗಳನ್ನು ಒದಗಿಸಲಾಗಿದೆ.
ಆದ್ದರಿಂದ ಕೆಎಂಸಿ ಕಾಯ್ದೆಯ ಸೆಕ್ಷನ್ 99ರ ಪ್ರಕಾರ ಚುನಾಯಿತ ಸದಸ್ಯರನ್ನು ವಜಾಗೊಳಿಸಿ, ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಮನವಿ ಮಾಡಿದರು. ಅರ್ಜಿದಾರರ ಪರ ವಕೀಲರ ಆರೋಪವನ್ನು ಬಿಬಿಎಂಪಿ ಪರ ವಕೀಲರು ತಳ್ಳಿ ಹಾಕಿದರು. ವಾದ-ಪ್ರತಿವಾದ ಆಲಿಸಿದ ಬಳಿಕ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ (ಅ.15)ರಂದು ಸಮಗ್ರ ಆದೇಶ ಪ್ರಕಟಿಸುವುದಾಗಿ ಹೇಳಿದ ನ್ಯಾಯಪೀಠ, ವಿಚಾರಣೆ ಮುಂದೂಡಿತು.