ಬೆಂಗಳೂರು: ಗೃಹ ಪ್ರವೇಶದ ವೇಳೆ ಹೆಲಿಕಾಪ್ಟರ್‌ನಿಂದ ಮನೆ ಮೇಲೆ ಹೂಮಳೆ ಸುರಿಸಲು (ಪುಷ್ಪವೃಷ್ಟಿ) ಅನುಮತಿ ನೀಡುವಂತೆ ಪೊಲೀಸರಿಗೆ ನಿರ್ದೇಶಿಸಿ!
ಹೀಗೊಂದು ಅಚ್ಚರಿ ಮತ್ತು ಕುತೂಹಲದ ಅರ್ಜಿಯೊಂದು ಹೈಕೋರ್ಟ್‌ನಲ್ಲಿ ದಾಖಲಾಗಿದೆ.
ಇಂತಹ ಅಪರೂಪದ ಮನವಿ ಮಾಡಿರುವುದು ಬೆಂಗಳೂರು ಪೂರ್ವ ತಾಲೂಕಿನ ಮುಳ್ಳೂರು ಗ್ರಾಮದ ನಿವಾಸಿ ಎಂ.ಮುನಿರಾಜು. ಇವರ ಮನವಿ ಕೇಳಿ ಖುದ್ದು ಹೈಕೋರ್ಟ್ ಅಚ್ಚರಿಗೆ ಒಳಗಾಯಿತಲ್ಲದೆ, ಸಮಸ್ಯೆ ಬಗೆಹರಿಸುವ ಸಂಬಂಧ ವರ್ತೂರು ಪೊಲೀಸರಿಂದ ಸಲಹೆಯನ್ನೂ ಕೇಳಿದೆ. ಅಲ್ಲದೆ, ಪ್ರಕರಣದ ಕುರಿತು ಅಗತ್ಯ ಸಲಹೆ ನೀಡುವಂತೆ ಸರ್ಕಾರಿ ವಕೀಲರ ಮೂಲಕ ನಗರ ಪೊಲೀಸ್ ಆಯುಕ್ತರು ಮತ್ತು ವರ್ತೂರು ಠಾಣಾಧಿಕಾರಿಗೆ ನ್ಯಾಯಪೀಠ ನಿರ್ದೇಶಿಸಿದೆ.
ಏನಿದು ಅರ್ಜಿ?: ಮುಳ್ಳೂರು ಗ್ರಾಮದಲ್ಲಿ ಎಂ.ಮುನಿರಾಜು ಅವರು ಭವ್ಯವಾದ ಮನೆಯೊಂದನ್ನು ನಿರ್ಮಿಸಿದ್ದು, ಫೆ. 9ರಂದು ಗೃಹಪ್ರವೇಶಕ್ಕೆ ದಿನಾಂಕ ನಿಗದಿಪಡಿಸಿ ಬಂಧು-ಬಳಗದವರನ್ನು ಆಹ್ವಾನಿಸಿದ್ದಾರೆ. ಅಲ್ಲದೆ, ಗೃಹಪ್ರವೇಶವನ್ನು ವಿಶಿಷ್ಠವಾಗಿ ಆಚರಿಸಲು ಅಂದು ಹೆಲಿಕಾಪ್ಟರ್ ಮೂಲಕ ಮನೆ ಮೇಲೆ ಪುಷ್ಪವೃಷ್ಠಿಗೆ ತೀರ್ಮಾನಿಸಿ ಅದಕ್ಕಾಗಿ ಡೆಕ್ಕನ್ ಏರ್‌ವೆಸ್ ಪ್ರೈವೇಟ್ ಲಿಮಿಟೆಡ್‌ನ ಹೆಲಿಕಾಪ್ಟರ್ ಕೂಡ ಕಾಯ್ದಿರಿಸಿದ್ದರು.
ಬಳಿಕ ಫೆ. 9ರಂದು ಮಧ್ಯಾಹ್ನ 11.30ರ ನಂತರ ಮನೆಯ ಮೇಲೆ ಹೆಲಿಕಾಪ್ಟರ್‌ನಿಂದ ಹೂಮಳೆ ಸುರಿಸಲು ಅನುಮತಿ ಕೋರಿ ವರ್ತೂರು ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಮನವಿ ಸಲ್ಲಿಸಿದ್ದರು. ಪೊಲೀಸರು ಮನವಿ ಪರಿಗಣಿಸಿಲ್ಲವೆಂಬ ಕಾರಣಕ್ಕೆ ಜ. 30ರಂದು ನಗರ ಪೊಲೀಸ್ ಆಯುಕ್ತರಿಗೂ ಮನವಿ ಸಲ್ಲಿಸಿದ್ದರು. ಆದರೆ, ನಗರ ಪೊಲೀಸ್ ಆಯುಕ್ತರು ತಮ್ಮ ಮನವಿ ತಿರಸ್ಕರಿಸಿದರು ಎಂಬ ಕಾರಣಕ್ಕೆ ಹೈಕೋರ್ಟ್ ಮೊರೆ ಹೋಗಿರುವ ಮುನಿರಾಜು, ಅನುಮತಿ ನೀಡುವಂತೆ ಪೊಲೀಸರಿಗೆ ನಿರ್ದೇಶಿಸಿ ಎಂದು ಕೋರಿದ್ದಾರೆ.
ಇಂತಹ ಮನವಿ ಕೋರ್ಟ್‌ಗೆ ಬರಬೇಕೇ?: ಗುರುವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ, ಏನಿದು ಅರ್ಜಿ? ಇದೆಂಥಾ ಮನವಿ? ಇಂತಹ ಮನವಿ ಇಟ್ಟುಕೊಂಡು ಕೋರ್ಟ್‌ಗೆ ಬರಬೇಕೇ? ಕೋರ್ಟ್ ಇಂತಹ ಮನವಿಯನ್ನು ಹೇಗೆ ಪರಿಗಣಿಸಿ ಸಮಸ್ಯೆ ಪರಿಹರಿಸಬಹುದು? ಹೆಲಿಕಾಪ್ಟ ರ್‌ನಿಂದ ಮನೆಯ ಮೇಲೆ ಹೂಮಳೆ ಸುರಿಸುವುದಕ್ಕೆ ಅನುಮತಿ ನೀಡದಿರುವುದರಿಂದ ಅರ್ಜಿದಾರರಿಗೆ ಯಾವ ರೀತಿ ಅನ್ಯಾಯವಾಗಿದೆ? ಯಾವ ಹಕ್ಕು ಉಲ್ಲಂಘನೆಯಾಗಿದೆ? ಪೊಲೀಸರಿಗೆ ಕೋರ್ಟ್ ಏನೆಂದು ನಿರ್ದೇಶಿಸಬೇಕು? ಎಂದು ಪ್ರಶ್ನಿಸುವುದರ ಜತೆಗೆ ಅಚ್ಚರಿಯನ್ನೂ ವ್ಯಕ್ತಪಡಿಸಿದರು.
ಈ ಕುರಿತು ಸರ್ಕಾರಿ ವಕೀಲರನ್ನು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲರಾದ ಪ್ರತಿಮಾ ಹೊನ್ನಾಪುರ, ಪ್ರಕರಣದ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮತ್ತಷ್ಟು ವಿವರಣೆ ಪಡೆಯಬೇಕಿದೆ. ಅದಕ್ಕಾಗಿ ಕಾಲಾವಕಾಶ ನೀಡಬೇಕೆಂದು ಕೋರಿದರು. ಆ ಮನವಿ ಪರಿಗಣಿಸಿ ನ್ಯಾಯಪೀಠ, ಸೋಮವಾರ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಸಲ್ಲಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.