Advertisement

ವಿದ್ಯಾರ್ಥಿಗಳಿಗೆ ಹೈಕೋರ್ಟ್‌ ಆಸರೆ

12:13 PM Apr 18, 2018 | Team Udayavani |

ಬೆಂಗಳೂರು: ಹಾಜರಾತಿ ಕೊರತೆ ಹಾಗೂ ಪರೀಕ್ಷಾ ಶುಲ್ಕ ಕಟ್ಟಲಾಗದೆ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಳ್ಳುವ ಆತಂಕದಲ್ಲಿದ್ದ ಇಬ್ಬರು ವಿದ್ಯಾರ್ಥಿಗಳ ನೆರವಿಗೆ ಹೈಕೋರ್ಟ್‌ ನೆರವಿಗೆ ಬಂದಿದೆ.

Advertisement

ಏ. 19ರಿಂದ ಆರಂಭವಾಗಲಿರುವ ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ಕೊಡಿಸುವಂತೆ ಕೋರಿ ಇಬ್ಬರು ಡಿಪ್ಲೋಮಾ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾ. ವಿನೀತ್‌ ಕೊಠಾರಿ ಅವರಿದ್ದ ಏಕಸದಸ್ಯ ಪೀಠ, ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.

ಇಬ್ಬರೂ ವಿದ್ಯಾರ್ಥಿಗಳು ಬಡತನ ಹಿನ್ನೆಲೆಯುಳ್ಳವರಾಗಿದ್ದು, ಪರೀಕ್ಷಾ ಶುಲ್ಕ ಸಕಾಲದಲ್ಲಿ ಪಾವತಿಸಲ ಆಗಲಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು  ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕಾಗಿದೆ.

ಹೀಗಾಗಿ ಅರ್ಜಿದಾರ ವಿದ್ಯಾರ್ಥಿಗಳಿಗೆ ಏ.19ರಿಂದ ಆರಂಭವಾಗಲಿರುವ ಎರಡನೇ ಸೆಮಿಸ್ಟರ್‌ ಪರೀಕ್ಷೆಗಳಿಗೆ ಹಾಜರಾಗಲು ಪ್ರವೇಶಪತ್ರ ನೀಡಬೇಕು ಎಂದು ಕೋರಮಂಗಲದ ಆರ್‌.ಜೆ.ಎಸ್‌ ಪಾಲಿಟೆಕ್ನಿಕ್‌ ಕಾಲೇಜಿಗೆ ನಿರ್ದೇಶಿಸಿತು. ಜತೆಗೆ, ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ 350.ರೂ. ಕಾಲೇಜಿಗೆ ಪಾವತಿಸಬೇಕು ಎಂದು ಇದೇ ವೇಳೆ ಸೂಚಿಸಿತು.

ಅಲ್ಲದೆ, ಅರ್ಜಿದಾರ ವಿದ್ಯಾರ್ಥಿಗಳ ಎರಡನೇ ಸೆಮಿಸ್ಟರ್‌ ಫ‌ಲಿತಾಂಶ ಈ ಅರ್ಜಿಗಳ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದೂ ಹೇಳಿರುವ ನ್ಯಾಯಪೀಠ, ಕಡ್ಡಾಯ ಹಾಜರಾತಿ ನಿಯಮಗಳಿಗೆ ಸಂಬಂಧಿಸಿದ ಆಕ್ಷೇಪಣೆ ಹಾಗೂ ದಾಖಲೆಗಳನ್ನು ಸಲ್ಲಿಸುವಂತೆ ತಾಂತ್ರಿಕ ಶಿಕ್ಷಣ ಮಂಡಳಿ ಹಾಗೂ ಕಾಲೇಜಿಗೆ ನಿರ್ದೇಶಿಸಿತು.

Advertisement

ಆಟೋಚಾಲಕರ ಮಕ್ಕಳಾದ ಮಡಿವಾಳದ ಟಿ.ರವಿ ಹಾಗೂ ವಿಜಯ್‌, ಕೋರಮಂಗಲದ ಆರ್‌.ಜೆ.ಎಸ್‌ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಡಿಪ್ಲೋಮಾ ಇನ್‌ ಮೆಕ್‌ಟ್ರಾನಿಕ್ಸ್‌ ಪದವಿಯ ಎರಡನೇ ಸೆಮಿಸ್ಟರ್‌ ವ್ಯಾಸಂಗ ಮಾಡುತ್ತಿದ್ದು, ಎರಡನೇ ಸೆಮಿಸ್ಟರ್‌ ಪರೀಕ್ಷೆಗೆ 350 ರೂ. ಪರೀಕ್ಷಾ ಶುಲ್ಕ ಪಾವತಿಸುವಂತೆ ಕಾಲೇಜು ಜ.28ರಂದು ಸುತ್ತೋಲೆ ಹೊರಡಿಸಿತ್ತು. ಆದರೆ, ಇಬ್ಬರೂ ಶುಲ್ಕ ಪಾವತಿಸಿರಲಿಲ್ಲ.

ನಂತರ 2 ಸಾವಿರ ರೂ. ದಂಡದೊಂದಿಗೆ ಶುಲ್ಕ ಪಾವತಿಗೆ ಮತ್ತೆ ಮೂರು ದಿನ ಕಾಲಾವಕಾಶ ನೀಡಿದ್ದರೂ ಶುಲ್ಕ ಪಾವತಿಸಲು ವಿದ್ಯಾರ್ಥಿಗಳು ವಿಫ‌ಲರಾಗಿದ್ದರು. ಹಾಜರಾತಿಯೂ ಇರಲಿಲ್ಲ. ಹೀಗಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕಾಲೇಜು ತಿಳಿಸಿತ್ತು. ಕಾಲೇಜಿನ ಈ ಕ್ರಮ ಪ್ರಶ್ನಿಸಿ ವಿದ್ಯಾರ್ಥಿಗಳು ಕೋರ್ಟ್‌ ಮೆಟ್ಟಿಲೇರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next