ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ವಿರುದ್ಧ ದುರ್ಭಾಷೆ ಬಳಸಬಾರದು. ಗೌರವದ ಹಾಗೂ ಸುಂದರ ಭಾಷೆ ಬಳಸಬೇಕು. ಮಾತಿನಲ್ಲಿ ಪ್ರೀತಿ, ಜವಾಬ್ದಾರಿ, ಸೌಜನ್ಯ ಹಾಗೂ ಸಂಯಮ ಇರಬೇಕು. ಚುನಾವಣೆ ವೇಳೆ ಜನರಿಗೆ ಜ್ವರ ಬಂದಿರುತ್ತದೆ. ಅಂತಹ ಸಂದರ್ಭದಲ್ಲಿ ಏನೇನೋ ಮಾತನಾಡಿ ಜನರನ್ನು ಉದ್ವೇಗಕ್ಕೆ ಗುರಿಪಡಿಸಬಾರದು. ನಾಲಗೆ ಮತ್ತು ಮಿದುಳಿನ ನಡುವಿನ ಸೇತುವೆ ಕುಸಿಯಬಾರದು.
– ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದ ಉಸ್ತುವಾರಿ ಪ್ರಶಾಂತ್ ಮಾಕನೂರು ಅವರಿಗೆ ರಾಜ್ಯ ಹೈಕೋರ್ಟ್ ಮಾಡಿದ ನೀತಿಪಾಠ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಪ್ರಕರಣದಲ್ಲಿ ತಮ್ಮ ವಿರುದ್ದ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಸಾಮಾಜಿಕ ಜಾಲತಾಣದ ಉಸ್ತುವಾರಿ ಪ್ರಶಾಂತ್ ಮಾಕನೂರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಈ ಹಿತ ಮಾತುಗಳನ್ನು ಹೇಳಿದರು. ಜತೆಗೆ ಅರ್ಜಿದಾರರ ವಿರುದ್ಧ ನಗರದ ಮಲ್ಲೇ ಶ್ವರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಎಫ್ಐಆರ್‌ಗಳಿಗೆ ತಡೆಯಾಜ್ಞೆ ನೀಡಿದೆ. ವಿಜಯೇಂದ್ರ ಅವರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದಿಸಿದ್ದರು.