ಬೆಂಗಳೂರು: ಲಾಕ್‌ಡೌನ್ ಇರುವುದರಿಂದ ರಾಜ್ಯದಲ್ಲಿ ವಿದ್ಯುತ್ ಬಿಲ್ ಪಾವತಿಸುವುದನ್ನು ತಾತ್ಕಾಲಿಕವಾಗಿ ಮೂರು ತಿಂಗಳು ಮುಂದೂಡಲು ಸರಕಾರ ಮತ್ತು ವಿದ್ಯುತ್ ನಿಯಂತ್ರಣ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯೊಂದನ್ನು ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರಿಗೆ 50 ಸಾವಿರ ರೂ.ಗಳ ದಂಡ ವಿಧಿಸಿದೆ.
ಬೆಂಗಳೂರಿನ ಪಿ.ಸಿ. ರಾವ್ ಮತ್ತು ಕೆ. ಗಣೇಶ್ ನಾಯಕ್ ಎಂಬವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನ್ಯಾ| ಎ.ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರು 50 ಸಾವಿರ ರೂ. ದಂಡ ಮೊತ್ತ ವನ್ನು ಸಿಎಂ ಪರಿಹಾರ ನಿಧಿಗೆ ಸಂದಾಯ ಮಾಡಿ 2 ವಾರದೊಳಗೆ ರಿಜಿಸ್ಟ್ರಾರ್ ಅವರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡ ಬೇಕು ಎಂದು ಹೈಕೋರ್ಟ್ ಆದೇಶ ದಲ್ಲಿ ಹೇಳಲಾಗಿದೆ.
ಆದರೆ ವಿದ್ಯುತ್ ಬಿಲ್ ಪಾವತಿಯನ್ನು 3 ತಿಂಗಳು ಮುಂದೂಡಬೇಕು ಎಂಬ ಅರ್ಜಿದಾರರ ಮನವಿ ಪರಿಗಣಿ ಸಲು ಸರಕಾರ ಮತ್ತು ವಿದ್ಯುತ್ ನಿಯಂತ್ರಣ ಪ್ರಾಧಿಕಾರಕ್ಕೆ ಈ ಆದೇಶ ಅಡ್ಡಿಯಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಪಾವತಿ ವಿಚಾರವಾಗಿ ಸರಕಾರ ಎ. 3ರಂದು ಸುತ್ತೋಲೆ ಹೊರಡಿಸಿತ್ತು. ಮುಂದೂಡಿಕೆಗೆ ಅವಕಾಶ ಕೇಳಿ ಎ.8ರ ಬೆಳಿಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಿದ ಅರ್ಜಿದಾರರು ಅದೇ ದಿನ ಮಧ್ಯಾಹ್ನ ಹೈಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದರು. ಮನವಿ ಪರಿಗಣಿಸಿ ಆದೇಶಿಸಲು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಕನಿಷ್ಠ ಒಂದು ದಿನವೂ ಸಮಯ ನೀಡಿಲ್ಲ. ಅಲ್ಲದೆ ಅರ್ಜಿ ಸಾರ್ವಜನಿಕ ಹಿತದೃಷ್ಟಿಯದಲ್ಲ ಎಂದು ಹೈಕೋರ್ಟ್ ಹೇಳಿದೆ.
ಪಾವತಿಗಿದೆ ಹಲವು ಮಾರ್ಗ
ವಿವಿಧ ಆನ್‌ಲೈನ್ ಮತ್ತು ಡಿಜಿಟಲ್ ವಿಧಾನಗಳ ಮೂಲಕ ವಿದ್ಯುತ್ ಬಿಲ್ ಪಾವತಿಗೆ ಅವಕಾಶ ಇದೆ. ಬಿಲ್ ಪಾವತಿಸ ದಿದ್ದರೆ ವಿದ್ಯುತ್ ಸಂಪರ್ಕ ಕಡಿತ ಗೊಳಿಸ ಲಾಗುವುದು ಎಂದು ಸರಕಾರ ಹೇಳಿಲ್ಲ. ಹೀಗಾಗಿ ಅರ್ಜಿ ವಿಚಾರಣೆ ನಡೆ ಸುವುದು ನಿಷ್ಪ್ರಯೋಜಕ. ಅಲ್ಲದೆ ಇಂತಹ ಅರ್ಜಿ ಸಲ್ಲಿಸುವುದು ಕಾನೂನಿನ ದುರ್ಬಳಕೆ ಮತ್ತು ಕೋರ್ಟ್ ಸಮಯ ವ್ಯರ್ಥ ಮಾಡಿದಂತೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.