ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಅಶ್ಲೀಲ ವೀಡಿಯೋಗಳಿರುವ ಪೆನ್‌ಡ್ರೈವ್ ಹಂಚಿಕೆ ಆರೋಪದಲ್ಲಿ ಹಾಸನ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಸೆ.26ಕ್ಕೆ ಮುಂದೂಡಿದೆ.
ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ಅವರು ಅಶ್ಲೀಲ ವೀಡಿಯೊಗಳನ್ನು ಒಳಗೊಂಡ ಪೆನ್‌ಡ್ರೈವ್ ಹಂಚಿಕೆ ಮಾಡಿಸಿದ್ದರೆ ಅದು ದೊಡ್ಡ ಪಾಪ. ಇದರಿಂದ ಸಂತ್ರಸ್ತೆಯರನ್ನು ತೀರ ಅವಮಾನಕ್ಕೆ ದೂಡಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಮೌಖೀಕವಾಗಿ ಹೇಳಿತು.
ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಬೆಂಗಳೂರಿನ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ಅದರ ಅನಂತರದ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಪ್ರೀತಂಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ, ಈ ಅರ್ಜಿಯು ನ್ಯಾಯಾಲಯದ ಮುಂದೆ ಬರದೆ ನಾಪತ್ತೆಯಾಗಿತ್ತು. ಅದಕ್ಕಾಗಿ ಈ ಅರ್ಜಿಯನ್ನು ಇಂದು ಪಟ್ಟಿ ಮಾಡುವಂತೆ ಸೂಚಿಸಿ¨ªೆ. ಜೂನ್ 28ರಂದು ನ್ಯಾಯಾಲಯವು ಅರ್ಜಿದಾರರನ್ನು ಬಂಧಿಸಬಾರದು ಎಂದು ಆದೇಶಿಸಿದೆ. ಆದರೆ ಅರ್ಜಿದಾರರು ಜಾಮೀನು ಪಡೆದಿಲ್ಲ ಎಂದು ಹೇಳಿತು.
ಪ್ರೀತಂಗೌಡ ಪರ ಹಿರಿಯ ವಕೀಲ ಸಿ.ವಿ.ನಾಗೇಶ್, ವಾದ ಮಂಡಿಸಲು ನಾನು ಸಿದ್ಧನಿದ್ದೇನೆ. ವಿಶೇಷ ತನಿಖಾ ದಳವು ತನಿಖೆ ಮುಂದುವರಿಸಬಹುದು. ಅದಕ್ಕೆ ನಮ್ಮ ಆಕ್ಷೇಪವಿಲ್ಲ ಎಂದರು. ಅರ್ಜಿದಾರರು ವಿಚಾರಣೆಗೆ ಸಹಕರಿಸುತ್ತಿಲ್ಲವೇ ಎಂದು ನ್ಯಾಯಪೀಠ ವಕೀಲರನ್ನು ಪ್ರಶ್ನಿಸಿತು.