ಬೆಂಗಳೂರು: ಕೊಡಗು ಜಿಲ್ಲೆಯ ಅರಣ್ಯ ಜಮೀನು, ಸರಕಾರಿ ಜಮೀನು, ಪಶ್ಚಿಮಘಟ್ಟ ಪ್ರದೇಶ ಹಾಗೂ ಬಾಣೆ, ಜಮ್ಮಾ, ಜಾಗೀರು, ಉಂಬಳಿ ಜಮೀನಿನ ಹಿಡುವಳಿದಾರರ ಜಮೀನುಗಳಲ್ಲಿನ ಮರಗಳನ್ನು ಕಡಿಯುವುದನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ವಿಚಾರವಾಗಿ ಮಡಿಕೇರಿ ನಿವಾಸಿ ಕೆ.ಎ. ರವಿ ಚೆಂಗಪ್ಪ ಹಾಗೂ ವೀರಾಜಪೇಟೆ ನಿವಾಸಿ ಸಿ.ಸಿ. ದೇವಯ್ಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ| ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.
ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ 14 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿ ವಿಚಾರಣೆಯನ್ನು ಸೆ. 30ಕ್ಕೆ ಮುಂದೂಡಿತು.ಮುಂದಿನ ವಿಚಾರಣೆಯ ಅವಧಿಯೊಳಗೆ ಮರಗಳನ್ನು ಕಡಿದರೆ ಅದರ ಮಾಹಿತಿಯನ್ನು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಇದೇ ವೇಳೆ ನ್ಯಾಯಪೀಠ ಸೂಚಿಸಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಜಮ್ಮಾ-ಬಾಣೆ, ಉಂಬಳಿ, ಜಾಗೀರು ಹಾಗೂ ಇತರ ಜಮೀನುಗಳಿಗೆ “ಪರಾಧೀನ ಜಮೀನು’ ಎಂದು ನಮೂದಿಸಿ ಲಕ್ಷಾಂತರ ಮರಗಳನ್ನು ಅವ್ಯಾಹತವಾಗಿ ಕಡಿಯಲಾಗುತ್ತಿದೆ. ಪರಾಧೀನ ಜಮೀನು ಎಂಬ ಪದ ಭೂ ಕಂದಾಯ ಕಾಯ್ದೆಯಲ್ಲೂ ಇಲ್ಲ, ಮರಗಳನ್ನು ಕಡಿಯಲು ಬಿಟ್ಟರೆ ಇತ್ತಿಚೆಗೆ ಕೇರಳದ ವಯನಾಡ್‌ನಲ್ಲಿ ಸಂಭವಿಸಿದಂತೆ ಕೊಡಗು ಜಿಲ್ಲೆಯಲ್ಲೂ ಭೂಕುಸಿತ ಆಗಬಹುದು. 2018ರಲ್ಲಿ ಜಿಲ್ಲೆಯಲ್ಲಿ ನಡೆದ ಭೂಕುಸಿತಕ್ಕೆ ಮರಗಳನ್ನು ಕಡಿದಿರುವುದೇ ಕಾರಣ. ಹಾಗಾಗಿ ಕೊಡಗು ಉಳಿಸಬೇಕಾಗಿದೆ ಎಂದು ಮನವಿ ಮಾಡಿದರು.