ಬೆಂಗಳೂರು: ಇಎಸ್‌ಐ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಇಎಸ್‌ಐ ಆಸ್ಪತ್ರೆಗಳಲ್ಲಿ ಐದು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು ಎಂಬ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಈ ಕುರಿತು ಪೂರ್ಣಿಮಾ ನಾಗ್ ಸೇರಿದಂತೆ ಇಎಸ್‌ಐ ವೈದ್ಯಕೀಯ ಕಾಲೇಜುಗಳಲ್ಲಿ ಪದವಿ ಪಡೆದಿದ್ದ 24 ಮಂದಿ ವೈದ್ಯ ಅಭ್ಯರ್ಥಿಗಳು 2018ರಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿರುವ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಇಎಸ್‌ಐ (ದಿ ಎಂಪ್ಲಾಯೀಸ್ ಸ್ಟೇಟ್ ಇನ್‌ಶ್ಯೂರೆನ್ಸ್ ಕಾರ್ಪೊರೇಷನ್) ವೈದ್ಯಕೀಯ ಕಾಲೇಜುಗಳಲ್ಲಿನ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ಪದವಿ ಬಳಿಕ ಇಎಸ್‌ಐ ಆಸ್ಪತ್ರೆಗಳಲ್ಲಿ ಐದು ವರ್ಷ ಕಡ್ಡಾಯ ಸೇವೆ ಸಲ್ಲಿಸುವ ಕುರಿತು “ಸರ್ವೀಸ್ ಬಾಂಡ್’ (ಸೇವಾ ಒಪ್ಪಂದ) ಪಡೆಯುವಂತಿಲ್ಲ ಎಂದು ತೀರ್ಪು ಕೊಟ್ಟಿದೆ.
ವೈದ್ಯಕೀಯ ಪದವಿಗೆ ಸೇರುವ ಅಭ್ಯರ್ಥಿ ಅಥವಾ ಪೋಷಕರಿಂದಾಗಲಿ ಇಎಸ್‌ಐ ಆಸ್ಪತ್ರೆಗಳಲ್ಲಿ ಐದು ವರ್ಷ ಕಡ್ಡಾಯ ಸೇವೆ ಸಲ್ಲಿಸುವ ಸರ್ವೀಸ್ ಬಾಂಡ್ ಪಡೆಯುವುದು ಕಾನೂನು ಬಾಹಿರ. ಅಂತಹ ಅಧಿಕಾರ ಇಎಸ್‌ಐಗಿಲ್ಲ. ಇದಕ್ಕೆ ಭಾರತೀಯ ವೈದ್ಯಕೀಯ ಪರಿಷತ್ತು ಅನುಮತಿ ಸಹ ನೀಡಿಲ್ಲ ಎಂದು ಆದೇಶದಲ್ಲಿ ಹೇಳಿರುವ ಹೈಕೋರ್ಟ್, ಇಎಸ್‌ಐ ಆಸ್ಪತ್ರೆಯಲ್ಲಿ ಐದು ವರ್ಷ ಕಡ್ಡಾಯ ಸೇವೆ ಸಲ್ಲಿಸಲು ಸೂಚಿಸಿ ಇಎಸ್‌ಐ 2018ರ ಜುಲೈ 3ರಂದು ಹೊರಡಿಸಿದ ಆದೇಶಗಳನ್ನು ರದ್ದುಪಡಿಸಿದೆ.
ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಕಡ್ಡಾಯ ಸೇವೆ ಒಪ್ಪಂದ ಸಂವಿಧಾನದಲ್ಲಿ ಸೂಚಿಸಿರುವಂತೆ ವೃತ್ತಿ ಹಕ್ಕು ಮತ್ತು ವೃತ್ತಿ ಆಯ್ಕೆಯ ಸ್ಪಷ್ಟ ಉಲ್ಲಂಘನೆ. ಆದ್ದರಿಂದ, ಸರ್ವೀಸ್ ಬಾಂಡ್ ಕುರಿತು ಅರ್ಜಿದಾರರು ಮತ್ತವರ ಪೋಷಕರ ಮೇಲೆ ಯಾವುದೇ ಜವಾಬ್ದಾರಿ ಇಲ್ಲ ಎಂದು ತಿಳಿಸಿ ಇಎಸ್‌ಐ ಮುಚ್ಚಳಿಕೆ ನೀಡಬೇಕು ಕೋರ್ಟ್ ಆದೇಶಿಸಿದೆ.
ವಿವಾದವೇನು?: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2012-13ನೇ ಸಾಲಿನಲ್ಲಿ ಅರ್ಜಿದಾರರಿಗೆ ಇಎಸ್‌ಐ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಹಂಚಿಕೆ ಮಾಡಿತ್ತು. ಪ್ರವೇಶದ ವೇಳೆ ಪದವಿ ಪಡೆದ ನಂತರ ಐದು ವರ್ಷ ಕಾಲ ಇಎಸ್‌ಐ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸುವ ಸಂಬಂಧ ಅರ್ಜಿದಾರರಿಂದ “ಸರ್ವೀಸ್ ಬಾಂಡ್’ ಪಡೆಯಲಾಗಿತ್ತು. 2018ರಲ್ಲಿ ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.