Advertisement
ಅನರ್ಹಗೊಂಡಿರುವ ಶಾಸಕರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ನೀಡಬಾರದು ಎಂದು ಜೆಡಿಎಸ್ ಶಾಸಕರಾದ ಸಿ.ಎನ್. ಬಾಲಕೃಷ್ಣ ಹಾಗೂ ಬಿ.ಬಿ. ನಿಂಗಯ್ಯ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ|ರಾಘವೇಂದ್ರ ಎಸ್. ಚೌಹಾಣ್, ಈಗ ಮಾ.23ಕ್ಕೆ ರಾಜ್ಯಸಭೆ ಚುನಾವಣೆ ನಡೆಯಲಿಕ್ಕಿದೆ. ಅದರಲ್ಲಿ ಪ್ರತಿವಾದಿ ಶಾಸಕರುಗಳು ಮತದಾನ ಮಾಡಲಿಕ್ಕಿದೆ. ಇಂತಹ ಸಂದರ್ಭದಲ್ಲಿ ಕಳೆದ ರಾಜ್ಯಸಭೆ ಚುನಾವಣೆ ವೇಳೆ ವಿಪ್ ಉಲ್ಲಂಘಿಸಿದ ಪ್ರಕರಣದ ಬಗ್ಗೆ ಸ್ಪೀಕರ್ ತಮ್ಮ ತೀರ್ಪು ಕಾಯ್ದಿರಿಸಿರುವುದರಲ್ಲಿ ಸಾಫಲ್ಯತೆ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟರು. ಹೀಗಾಗಿ ಸ್ಪೀಕರ್ ತೀರ್ಪು ಕೊಡಬೇಕಾದ ಇಕ್ಕಟ್ಟಿಗೆ ಸಿಲುಕಿದ್ದು, ತೀರ್ಪು ಏನು ಎಂಬುದು ಕುತೂಹಲ ಮೂಡಿಸಿದೆ.
ಅಡ್ವೋಕೇಟ್ ಜನರಲ್ ಮಧುಸೂಧನ್ ಆರ್. ನಾಯಕ್, ಸ್ಪೀಕರ್ ಕೆ.ಬಿ. ಕೋಳಿವಾಡ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಮಾ.21ರ ಮಧ್ಯಾಹ್ನ 12 ಗಂಟೆಯೊಳಗೆ ತೀರ್ಪು ನೀಡುವಂತೆ ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಡ್ವೋಕೇಟ್ ಜನರಲ್ ಅವರಿಂದ ಸ್ಪೀಕರ್ ಕಾನೂನು ಸಲಹೆ ಪಡೆದುಕೊಂಡರು ಎನ್ನಲಾಗಿದೆ.