ಬೆಂಗಳೂರು: ಕೋಟ್ಯಂತರ ರೂಪಾಯಿ “ಕಿಕ್‌ಬ್ಯಾಕ್’ ಪಡೆದುಕೊಂಡಿದ್ದಾರೆ ಎಂಬ ಆರೋಪ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತವರ ಕುಟುಂಬದ ಸದಸ್ಯರು ಹಾಗೂ ಕೆಲ ಆಪ್ತರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಪ್ರಕರಣದ ಮರು ವಿಚಾರಣೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ಮುಖ್ಯಮಂತ್ರಿಯಾಗಿದ್ದ ವೇಳೆ ಯಡಿಯೂರಪ್ಪ ಮತ್ತು ಪುತ್ರ ಬಿ.ವೈ. ವಿಜಯೇಂದ್ರ ಸಹಿತ ಅವರ ಕುಟುಂಬಸ್ಥರು ರಾಮಲಿಂಗಂ ಕನ್‌ಸ್ಟ್ರಕ್ಷನ್ ಕಂಪೆನಿಯಿಂದ 12 ಕೋಟಿ ರೂ. (ಕಿಕ್ ಬ್ಯಾಕ್) ಪಡೆದುಕೊಂಡಿದ್ದರು ಎಂಬ ಪ್ರಕರಣ ಇದಾಗಿದೆ.
ಪ್ರಕರಣವನ್ನು ವಿಶೇಷ ತನಿಖಾ ದಳದ ತನಿಖೆಗೆ ಆದೇಶಿಸುವಂತೆ ಕೋರಿ ದಾಖಲಿಸಿದ್ದ ಖಾಸಗಿ ದೂರನ್ನು ರದ್ದುಪಡಿಸಿದ್ದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೂರುದಾರರಾದ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆಯನ್ನು 2022ರ ಜೂ.21ರಂದು ಪೂರ್ಣಗೊಳಿಸಿ ಕಾದಿರಿಸಿದ್ದ ತೀರ್ಪನ್ನು ಬುಧವಾರ ಪ್ರಕಟಿಸಿರುವ ನ್ಯಾ| ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿ ಪ್ರಕರಣದ ಸಂಬಂಧ ದಾಖಲಾಗಿದ್ದ ಖಾಸಗಿ ದೂರು ಆಧರಿಸಿ ಮರು ವಿಚಾರಣೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿದೆ.
ಪಕರಣದಲ್ಲಿ ಆರೋಪಿಗಳ ವಿರುದ್ಧದ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದೂರುದಾರರು ಮಾಡಿರುವ ಆರೋಪಗಳ ಕುರಿತು ಮರು ವಿಚಾರಣೆ ನಡೆಸುವಂತೆ ಜನ ಪ್ರತಿನಿಧಿ ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿರುವ ಹೈಕೋರ್ಟ್, ಶೆಲ್ ಕಂಪೆನಿಗಳ ಮೂಲಕ ಕೋಟ್ಯಂತರ ರೂ. ಅನ್ನು ಅಕ್ರಮವಾಗಿ ವರ್ಗಾಯಿಸಿದ ಸಂಬಂಧ ದೂರಿನಲ್ಲಿ ಉಲ್ಲೇಖೀಸಿರುವ ಆರೋಪಗಳ ಕುರಿತು “ಕಾಗ್ನಿಜೆನ್ಸ್ ‘ (ಸಂಜ್ಞೆಯ) ತೆಗೆದುಕೊಳ್ಳುವುದಕ್ಕೆ ವಿಶೇಷ ನ್ಯಾಯಾಲಯ ಅಧಿಕಾರ ಹೊಂದಿಲ್ಲ. ಆದರೆ, ಆ ಕುರಿತು ದೂರುದಾರರು ಸೂಕ್ತ ಪ್ರಕ್ರಿಯೆ ಮೂಲಕ ಮುಂದುವರಿಯಬಹುದು ಎಂದು ಸ್ಪಷ್ಟಪಡಿಸಿದೆ.
ಯಡಿಯೂರಪ್ಪ ಮತ್ತು ಇತರರ ವಿರುದ್ಧದ ಖಾಸಗಿ ದೂರು ದಾಖಲಿಸಲು ದೂರುದಾರರಿಗೆ ರಾಜ್ಯಪಾಲರು ಅಗತ್ಯ ಪೂರ್ವಾನುಮತಿ ನೀಡಲು ನಿರಾಕರಿಸಿದ್ದಾರೆ. ಅದನ್ನು ಆಧರಿಸಿ ದೂರು ವಿಚಾರಣ ಮಾನ್ಯತೆ ಹೊಂದಿಲ್ಲ ಎಂದು ತಿಳಿಸಿ ವಿಶೇಷ ನ್ಯಾಯಾಲಯ ಖಾಸಗಿ ದೂರನ್ನು ರದ್ದುಪಡಿಸಿತ್ತು. ಆದರೆ, ರಾಜ್ಯಪಾಲರು ಪೂರ್ವಾ ನುಮತಿ ನಿರಾಕರಿಸಿದ ಮಾತ್ರಕ್ಕೆ ಖಾಸಗಿ ದೂರಿನ ವಿಚಾರಣೆ ಮುಂದುವರಿಸಲು ಯಾವುದೇ ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದೆ.