ಬೆಂಗಳೂರು: ನಿಯಮ ಉಲ್ಲಂಘಿಸಿದ್ದಲ್ಲದೆ ಅದನ್ನು ಸರಿಪಡಿಸಲು ಹತ್ತಾರು ಬಾರಿ ಅವಕಾಶ ನೀಡಿದರೂ ಕಳೆದ 11 ವರ್ಷಗಳಿಂದ ಒಂದಿಲ್ಲ ಒಂದು ಸಬೂಬುಗಳನ್ನು ಹೇಳಿಕೊಳ್ಳುತ್ತಲೇ ಬಂದಿರುವ ಹಿನ್ನೆಲೆಯಲ್ಲಿ ಖಾಸಗಿ ನಿರ್ಮಾಣ ಸಂಸ್ಥೆಯೊಂದು ಬೆಂಗಳೂರು ಉತ್ತರ ತಾಲೂಕು ಪೀಣ್ಯದಲ್ಲಿ ನಿರ್ಮಿಸಿರುವ 15 ಅಂತಸ್ತಿನ ಅಪಾರ್ಟ್‌ಮೆಂಟ್ ನೆಲಸಮಗೊಳಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಖಾಸಗಿ ನಿರ್ಮಾಣ ಸಂಸ್ಥೆಯು ಸಲ್ಲಿಸಿರುವ ಅರ್ಜಿಯು ಇತ್ತೀ ಚೆ ಗೆ ನ್ಯಾಯಮೂರ್ತಿ ಸೂರಜ್ ಗೋವಿಂದ್‌ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಮೆಮೋ ಸಲ್ಲಿಸಿ ಅಪಾರ್ಟ್‌ಮೆಂಟ್‌ನ 15ನೇ ಅಂತಸ್ತು ನೆಲಸಮಗೊಳಿಸಲು ಕಷ್ಟ ಎಂದು “ವಿನ್ಯಾಸ ಸಮಾಲೋಚಕರು’ (ಸ್ಟ್ರಕ್ಚರಲ್ ಕನ್ಸಲ್ಟೆಂಟ್) ಅಭಿಪ್ರಾಯ ನೀಡಿದ್ದಾರೆ. ಒಂದೊಮ್ಮೆ 15ನೇ ಅಂತಸ್ತು ನೆಲಸಮಗೊಳಿಸಿದರೆ ಇಡೀ ಅಪಾರ್ಟ್‌ಮೆಂಟ್ ಕಟ್ಟಡ (15 ಅಂತಸ್ತು) ವಿನ್ಯಾಸಕ್ಕೆ ಧಕ್ಕೆ ಬರಲಿದೆ. ಅಲ್ಲದೆ ಅಕ್ಕ-ಪಕ್ಕದ ಕಟ್ಟಡಗಳಿಗೂ ಹಾನಿಯಾಗುವ ಸಾಧ್ಯತೆಯಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಈ ಹಂತದಲ್ಲಿ ಅರ್ಜಿದಾರರ ಪರ ವಕೀಲರ ಈ ವಾದ ಅರ್ಥ ಆಗುತ್ತಿಲ್ಲ. ಬಿಡಿಎ ನಿಯಮಗಳನ್ನು ಪಾಲಿಸಿದ್ದರೆ ಕಟ್ಟಡವನ್ನು ಉಳಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಿ ಎಂದು ಹಿಂದೆ ನ್ಯಾಯಾಲಯ ಹೇಳಿತ್ತು. ಈ ಮಧ್ಯೆ ಅನೇಕ ಬಾರಿ ಅರ್ಜಿದಾರರಿಗೆ ಅವಕಾಶ ನೀಡಲಾಗಿದೆ. ಇಡೀ ಕಟ್ಟಡ ಉಳಿಸುವ ದೃಷ್ಟಿಯಿಂದ 15ನೇ ಅಂತಸ್ತು ನೆಲಸಮ ಮಾಡಲು ಅಥವಾ ತೆರವುಗೊಳಿಸಲು ಅರ್ಜಿದಾರರಿಗೆ ಅವಕಾಶ ನೀಡಲಾಗಿತ್ತು. ಆದರೆ, ಈಗ ಹೊಸ ವರಸೆ ತೆಗೆದಿರುವ ಅರ್ಜಿದಾರರು, 15ನೇ ಅಂತಸ್ತು ತೆರವು ಗೊಳಿಸುವುದರಿಂದ ಇಡೀ ಕಟ್ಟಡಕ್ಕೆ ಹಾನಿಯಾಗಲಿದೆ ಎಂದು 15ನೇ ಅಂತಸ್ತು ತೆರವುಗೊಳಿಸಲು ಸಾಧ್ಯವೇ ಇಲ್ಲ ಎಂದು ನೇರವಾಗಿ ಹೇಳುತ್ತಿದ್ದಾರೆ ಎಂದು ನ್ಯಾಯಪೀಠ ಅಸಮಧಾನ ಹೊರಹಾಕಿದೆ.
ಈ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ನ “ಎ’ ಬ್ಲಾಕ್ಸ್‌ನ ಇಡೀ 15 ಅಂತಸ್ತುಗಳನ್ನು ನೆಲಸಮ ಅಥವಾ ತೆರವುಗೊಳಿಸಲು ಕಾನೂನು ಮತ್ತು ನಿಯಮಗಳ ಆಧಾರದಲ್ಲಿ ಯೋಜನೆ ರೂಪಿಸುವಂತೆ ಬಿಡಿಎ ಆಯುಕ್ತರಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ. ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ಖರೀದಿದಾರರಿಗೆ ಆಗುವ ನಷ್ಟ ಮತ್ತು ನೆಲಸಮದ ವೆಚ್ಚವನ್ನು ಅರ್ಜಿದಾರರರೇ ಭರಿಸಬೇಕು ಎಂದು ಮಧ್ಯಂತರ ಆದೇಶ ನೀಡಿತು. ಬಿಡಿಎ ಪರ ವಕೀಲರ ವಾದ ಮಂಡಿಸಿ ನೆಲಸಮ ಅಥವಾ ತೆರವು ಬಗ್ಗೆ ಎರಡು ವಾರಗಳಲ್ಲಿ ಟೆಂಡರ್ ಕರೆಯಲಾಗುವುದು, ಅದರ ನಂತರ ಒಂದು ವಾರದಲ್ಲಿ ಆದ ಬೆಳವಣಿ ಗೆಗಳನ್ನು ನ್ಯಾಯಾಲಯ ದ ಮುಂದಿಡಲಾಗುವುದು ಎಂದು ತಿಳಿಸಿದರು. ಅದರಂತೆ, ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್ 11ಕ್ಕೆ ಮುಂದೂಡಿದೆ.