Advertisement

ಒಕ್ಕಲಿಗರ ಸಂಘ: ಡಿ.31ರೊಳಗೆ ಚುನಾವಣೆ ನಡೆಸಲು ಹೈಕೋರ್ಟ್‌ ಆದೇಶ

09:42 PM Sep 09, 2021 | Team Udayavani |

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘಕ್ಕೆ ಈ ವರ್ಷದ ಡಿಸೆಂಬರ್‌ 31ರೊಳಗೆ ಚುನಾವಣೆ ನಡೆಸುವಂತೆ ಸರಕಾರಕ್ಕೆ ಹೈಕೋರ್ಟ್‌ ಆದೇಶ ನೀಡಿದೆ.

Advertisement

ಸಂಘಕ್ಕೆ ಚುನಾವಣೆ ನಡೆಸುವಂತೆ ಕೋರಿ ಗುರುರಾಜ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸಂಘಕ್ಕೆ 2021ರ ಡಿಸೆಂಬರ್‌ 31ರೊಳಗೆ ಚುನಾವಣೆ ನಡೆಸಬೇಕು. ಇಲ್ಲದಿದ್ದಲ್ಲಿ ನ್ಯಾಯಾಂಗ ನಿಂದನೆ ಅಡಿ ಕ್ರಮ ಜರಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ

ಒಕ್ಕಲಿಗರ ಸಂಘಕ್ಕೆ 2014ರ ಜನವರಿ 5 ರಂದು ಚುನಾವಣೆ ನಡೆಸಲಾಗಿತ್ತು. ಆದರೆ, ಅವಿಶ್ವಾಸ ಮಂಡನೆ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷರು ಪದಚ್ಯುತಗೊಂಡಿದ್ದರು. ಆ ಬಳಿಕ ಸಂಘಕ್ಕೆ ಸರಕಾರ 6 ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಆ ಬಳಿಕವೂ ಆಡಳಿತಾಧಿಕಾರಿಯನ್ನು ಮುಂದುವರಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ:ದೆಹಲಿ ಮೆಟ್ರೋ ವಿರುದ್ಧ ಅನಿಲ್‌ ಅಂಬಾನಿಗೆ ಜಯ

ಸಂಘಕ್ಕೆ ಮೂರು ತಿಂಗಳ ಒಳಗೆ ಚುನಾವಣೆ ನಡೆಸಬೇಕು ಎಂದು 2021ರ ಮಾರ್ಚ್‌ 5ರಂದು ಹೈಕೋರ್ಟ್‌ ಆದೇಶಿಸಿತ್ತು. ಆದರೆ, ಕೋವಿಡ್‌ ಕಾರಣ ಹೇಳಿದ್ದ ಸರ್ಕಾರ ಚುನಾವಣೆ ನಡೆಸಲು ನೀಡಿದ್ದ ಗಡುವು ವಿಸ್ತರಿಸುವಂತೆ ಮನವಿ ಮಾಡಿತ್ತು. ಕೋರಿಕೆ ಪರಿಗಣಿಸಿದ್ದ ನ್ಯಾಯಾಲಯ ಪರಿಸ್ಥಿತಿ ಸುಧಾರಿಸಿದ ಬಳಿಕ ಚುನಾವಣೆ ನಡೆಸಲು ಸೂಚಿಸಿತ್ತು.

Advertisement

ಪ್ರಸ್ತುತ ಕೋವಿಡ್‌ ಸೋಂಕು ಇಳಿಮುಖವಾಗಿದ್ದು, ಚುನಾವಣೆ ನಡೆಸುವಂತೆ ಅರ್ಜಿದಾರರು 2021ರ ಆಗಸ್ಟ್‌ 3 ಮತ್ತು 9ರಂದು ಸಂಘದ ಚುನಾವಣಾಧಿಕಾರಿಗೆ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದರು. ಆದರೆ, ಸರಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸಂಘಕ್ಕೆ ಚುನಾವಣೆ ನಡೆಸಲು ಸರಕಾರ ಹಾಗೂ ಸಂಬಂಧಿತ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next