Advertisement

ಒಕ್ಕಲಿಗರ ಸಂಘಕ್ಕೆ ಮೂರು ತಿಂಗಳಲ್ಲಿ ಚುನಾವಣೆ ನಡೆಸಿ: ಹೈಕೋರ್ಟ್‌ ಆದೇಶ

09:05 PM Mar 05, 2021 | Team Udayavani |

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘಕ್ಕೆ ಮೂರು ತಿಂಗಳಲ್ಲಿ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ. ಶುಕ್ರವಾರ ಆದೇಶ ಮಾಡಿದೆ.

Advertisement

ಸಂಘಕ್ಕೆ ಚುನಾವಣೆ ನಡೆಸಲು ಆದೇಶಿಸುವಂತೆ ಕೋರಿ ಕೃಷ್ಣೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಶುಕ್ರವಾರ ಈ ತೀರ್ಪು ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಸಂಘದ ಪದಾಧಿಕಾರಿಗಳ ನಡುವೆ ಉಂಟಾದ ಭಿನ್ನಾಭಿಪ್ರಾಯಗಳಿಂದ ಹಿಂದಿನ ಕಾರ್ಯಕಾರಿ ಸಮಿತಿಯನ್ನು ಪದಚ್ಯುತಿಗೊಳಿಸಲಾಗಿತ್ತು. ನಂತರ ಸರ್ಕಾರ, ಸಂಘದ ಕೆಲಸ-ಕಾರ್ಯಗಳ ನಿರ್ವಹಣೆಗೆ ನಿವೃತ್ತ ಐಪಿಎಸ್‌ ಅಧಿಕಾರಿ ಎಂ.ಕೆ. ಶಂಕರಲಿಂಗೇಗೌಡ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿತ್ತು. ಕಾನೂನು ಪ್ರಕಾರ ಆರು ತಿಂಗಳ ನಂತರ ಆಡಳಿತಾಧಿಕಾರಿಯ ಅವಧಿ ಹಾಗೂ ಅಧಿಕಾರ ಪೂರ್ಣಗೊಳ್ಳುತ್ತದೆ.

ಆಡಳಿತಾಧಿಕಾರಿಯ ಅವಧಿ ಪೂರ್ಣಗೊಳ್ಳುವರೆಗೆ ಚುನಾವಣೆ ನಡೆಸಬೇಕಾಗುತ್ತದೆ. ಆದರೆ, ಕಳೆದ ಎರಡೂವರೆ ವರ್ಷದಿಂದಲೂ ಸತತವಾಗಿ ಆಡಳಿತಾಧಿಕಾರಿಯ ಅವಧಿ ವಿಸ್ತರಿಸಿಕೊಂಡು ಬರಲಾಗಿದ್ದು, ಸಂಘಕ್ಕೆ ಚುನಾವಣೆ ನಡೆಸಿರುವುದಿಲ್ಲ ಎಂದರು.

ಇದನ್ನೂ ಓದಿ :ಮಾವಿಗೆ ಬೆಂಕಿ ಸುರಿದ ಇಬ್ಬನಿ !ಇಬ್ಬನಿಗೆ ಕಮರಿದ ಆಲ್ಫೋನ್ಸೋ|

Advertisement

ಈ ವಾದ ಪರಿಗಣಿಸಿದ ನ್ಯಾಯಪೀಠ, ನಿಯಮ ಪ್ರಕಾರ ಆರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ಆಡಳಿತಾಧಿಕಾರಿಯನ್ನು ವಿಸ್ತರಿಸುವಂತಿಲ್ಲ. ಆದರೆ, ಈ ಪ್ರಕರಣದಲ್ಲಿ ಎರಡೂವರೆ ವರ್ಷಗಳಿಂದಲೂ ಆಡಳಿತಾಧಿಕಾರಿಯ ಅವಧಿ ಹಾಗೂ ಅಧಿಕಾರವನ್ನು ವಿಸ್ತರಿಸಿಕೊಂಡು ಬರಲಾಗುತ್ತಿದೆ. ಆದ್ದರಿಂದ ಸಂಘಕ್ಕೆ ಚುನಾವಣೆ ನಡೆಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಮುಂದಿನ ಮೂರು ತಿಂಗಳಲ್ಲಿ ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next