Advertisement

ಟೋಲ್‌ ಸಂಗ್ರಹಿಸದಂತೆ ಹೈ ಆದೇಶ

10:23 AM Dec 10, 2019 | Suhan S |

ಬೆಂಗಳೂರು: ಬೆಂಗಳೂರುದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ಮಾಡದಂತೆ ಸರ್ಕಾರ ಮತ್ತು ಯಲಹಂಕ ಎಪಿ ಬಾರ್ಡರ್‌ ಟೋಲ್‌ ಹೈವೇಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ.

Advertisement

ಬೆಂಗಳೂರುದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದಿದ್ದರೂ ರಾಜನಕುಂಟೆ ಸಮೀಪದ ಟೋಲ್‌ ಕೇಂದ್ರದಲ್ಲಿ ಅಕ್ರಮವಾಗಿ ಟೋಲ್‌ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ ದೊಡ್ಡ ಬಳ್ಳಾಪುರದ ವಕೀಲ ಜಿ.ವೆಂಕಟೇಶ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ಬೆಂಗಳೂರುದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯ ಕಾಮಗಾರಿ ಎಷ್ಟು ಪ್ರಮಾಣದಲ್ಲಿ ಪೂರ್ಣಗೊಂಡಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲು ಸ್ವತಂತ್ರ ಎಂಜಿನಿಯರ್‌ ನೇಮಿಸಬೇಕು. ಕಾಮಗಾರಿ ಪರಿಶೀಲಿಸಿ ಅವರು ನೀಡುವ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಈ ಹಿಂದೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಅದರಂತೆ ಸರ್ಕಾರಿ ವಕೀಲರು ಸೋಮವಾರ ನ್ಯಾಯಪೀಠಕ್ಕೆ ವರದಿ ಸಲ್ಲಿಸಿದರು.

ಬೆಂಗಳೂರುದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯ ಕಾಮಗಾರಿ ಶೇ.75ರಷ್ಟು ಪೂರ್ಣಗೊಂಡಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವೆಂಕಟೇಶ್‌ ಪಿ. ದಳವಾಯಿ, ಕಾಮಗಾರಿಯು ಶೇ.75ರಷ್ಟು ಪೂರ್ಣಗೊಂಡಿಲ್ಲ. ಸರ್ಕಾರ ತಮಗೆ ಬೇಕಾದವರನ್ನು ನೇಮಿಸಿಕೊಂಡು ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂಬುದಾಗಿ ತಪ್ಪು ಮಾಹಿತಿ ನೀಡುತ್ತಿದೆ ಎಂದು ಕೋರ್ಟ್‌ ಗಮನಕ್ಕೆ ತಂದರು.

ಅರ್ಜಿದಾರರ ಪರ ವಕೀಲರ ಆಕ್ಷೇಪಕ ಹಾಗೂ ಸರ್ಕಾರದ ಪ್ರಮಾಣಪತ್ರ ಅಸಮರ್ಪಕವಾಗಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ಬೆಂಗಳೂರುದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹಣೆ ಮಾಡಬಾರದು ಎಂದು ಸರ್ಕಾರ ಮತ್ತು ಟೋಲ್‌ ಕೇಂದ್ರ ನಿರ್ವಹಿಸುತ್ತಿರುವ ಯಲಹಂಕ ಎಪಿ ಬಾರ್ಡರ್‌ ಟೋಲ್‌ ಹೈವೇಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ಮಧ್ಯಂತರ ಆದೇಶ ಮಾಡಿ ವಿಚಾರಣೆ ಮುಂದೂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next