ಬೆಂಗಳೂರು: ಅಪ್ರಾಪ್ತ ವಯಸ್ಕರು ಸನ್ಯಾಸತ್ವ ಸ್ವೀಕರಿಸಿ ಮಠದ ಪೀಠಾಧಿಪತಿಯಾಗುವ ವಿಚಾರವನ್ನು ಆಪೇಕ್ಷೆಗಳ ಬದಲಿಗೆ ಕಾನೂನಿನ ಅವಕಾಶಗಳ ಅಡಿಯಲ್ಲಿ ಪರಿಶೀಲಿಸಬೇಕಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಉಡುಪಿಯ ಶ್ರೀ ಶೀರೂರು ಮಠದ ಪೀಠಾಧಿಪತಿ ಸ್ಥಾನಕ್ಕೆ ಅಪ್ರಾಪ್ತ ವಯಸ್ಕರನ್ನು ನೇಮಿಸಿದ ಕ್ರಮವನ್ನು ಪ್ರಶ್ನಿಸಿ ಮಠದ ಭಕ್ತ ಸಮಿತಿ ಕಾರ್ಯದರ್ಶಿ ಪಿ. ಲಾತವ್ಯ ಆಚಾರ್ಯ ಸಹಿತ ನಾಲ್ವರು ಸಲ್ಲಿಸಿ ರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾ| ಎ.ಎಸ್. ಓಕ್ ಹಾಗೂ ನ್ಯಾ| ಎನ್.ಎಸ್. ಸಂಜಯ್ ಗೌಡ ಅವರಿದ್ದ ವಿಭಾಗೀಯ ನ್ಯಾಯ ಪೀಠ ಮಂಗಳ ವಾರ ಈ ರೀತಿ ಅಭಿಪ್ರಾಯಪಟ್ಟಿತು.
ವಿಚಾರಣೆ ವೇಳೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗದ ಪರ ವಕೀಲರು, ಪೀಠಾಧಿಪತಿಯಾಗಿರುವ ಅಪ್ರಾಪ್ತರು ಹಾಗೂ ಅವರ ತಂದೆಯನ್ನು ಆಯೋಗ ಭೇಟಿ ಮಾಡಿ ಸಮಾಲೋಚನೆ ನಡೆಸಿತು. ಪುತ್ರ ಪೀಠಾಧಿಪತಿ ಆಗಬೇಕೆಂಬುದು ತಂದೆಯ ಆಸೆಯಾಗಿತ್ತು. ಪೀಠಾಧಿಪತಿಯಾಗಲು ತನಗೂ ಇಷ್ಟವಿತ್ತು. ಅದರಂತೆ ಸನ್ಯಾಸತ್ವ ಸ್ವೀಕರಿಸಿ ಪೀಠಾಧಿಪತಿ ಯಾಗಲು ಒಪ್ಪಿದ್ದೇನೆಂದು ಅಪ್ರಾಪ್ತ ವಯಸ್ಕ ಪೀಠಾಧಿಪತಿಯೂ ಆಯೋಗಕ್ಕೆ ತಿಳಿಸಿದರು ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದೇ ವಿಚಾರವನ್ನು ಉಡುಪಿ ಜಿಲ್ಲಾ ಮಕ್ಕಳ ಹಕ್ಕುಗಳ ಸಂರಕ್ಷಣ ಘಟಕವೂ ನ್ಯಾಯಪೀಠಕ್ಕೆ ತಿಳಿಸಿತು.
ಅದಕ್ಕೆ ನ್ಯಾಯಪೀಠವು, ಸನ್ಯಾ ಸತ್ವ ಸ್ವೀಕರಿಸಲು ಮತ್ತು ಪೀಠಾಧಿಪತಿ ಯಾಗಲು ಅಪ್ರಾಪ್ತ ವಯಸ್ಕರ ಪೋಷಕರ ಸಮ್ಮತಿ ಇತ್ತು. ಪೋಷಕರ ಆಸೆ ಈಡೇರಿಸಲು ಮಕ್ಕಳು ಒಪ್ಪಿಕೊಂಡರು ಎಂಬ ಹೇಳಿಕೆಗಳನ್ನು ಸುಲಭವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸನ್ಯಾಸತ್ವ ಸ್ವೀಕರಿಸಲು ಸಮ್ಮತಿ ಸೂಚಿಸು ವುದಕ್ಕೆ ಹಾಗೂ ಅಪ್ರಾಪ್ತ ವಯಸ್ಕ ಪುತ್ರ ಸನ್ಯಾಸತ್ವ ಸ್ವೀಕರಿಸಲು ಪೋಷಕರು ಒಪ್ಪಿಗೆ ನೀಡಲು ಕಾನೂನಿನಲ್ಲಿ ಅವಕಾಶ ಇದೆಯೇ? ಸನ್ಯಾಸತ್ವದ ಪರಿಣಾಮಗಳು ಅಪ್ರಾಪ್ತ ವಯಸ್ಕರಿಗೆ ತಿಳಿದಿರು ತ್ತವೆಯೇ ಮುಂತಾದ ಅಂಶ ಗಳನ್ನು ಪರಿಗಣಿಸ ಬೇಕಾ ಗುತ್ತದೆ ಎಂದು ಹೇಳಿತು.
ಅಲ್ಲದೆ, ಅರ್ಜಿ ಕುರಿತು ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಾದ ರಾಜ್ಯ ಸರಕಾರ, ಸೋದೆ ವಾದಿರಾಜ ಮಠ ಮತ್ತು ಅದರ ಪೀಠಾಧಿಪತಿಗೆ ಕೊನೆಯ ಅವಕಾಶ ನೀಡಿ ವಿಚಾರಣೆಯನ್ನು ಸೆ. 13ಕ್ಕೆ ಮುಂದೂಡಿತು.