ಬೆಂಗಳೂರು: ಕೋವಿಡ್ 19 ನಿರ್ವಹಣೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ತಜ್ಞರ ಸಮಿತಿ ರಚಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ‘ಕೋವಿಡ್ 19 ನಿರ್ವಹಣೆ ವಿಚಾರದಲ್ಲಿ ಸರಕಾರದ ಆಡಳಿತ ಯಂತ್ರ ಕುಸಿದಿದೆ. ಬೆಸ್ಟ್ ಆಗಿದ್ದ ನಮ್ಮ ರಾಜ್ಯ ವರ್ಸ್ಡ್ ಸ್ಥಿತಿಗೆ ಬಂದಿದೆ ಎಂದು ಚಾಟಿ ಬೀಸಿದೆ.
ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿ ಸಲ್ಲಿಸಲಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾ| ಅರವಿಂದ ಕುಮಾರ್ ಹಾಗೂ ನ್ಯಾ| ಎಂ.ಐ. ಅರುಣ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಹೆಚ್ಚುವರಿ ಅಡ್ವೊಕೇಟ್ ಜನರಲ್, ತಜ್ಞರ ಸಮಿತಿ ರಚನೆ ಸಹಿತ ಹೈಕೋರ್ಟ್ ನಿರ್ದೇಶನಗಳನ್ನು ಪಾಲಿಸಿದ ಕುರಿತು ಲಿಖಿತ ಹೇಳಿಕೆಯನ್ನು ಸಲ್ಲಿಸಿದರು. ಇದನ್ನು ಪರಿಶೀಲಿಸಿದ ನ್ಯಾಯಪೀಠ, ಸಮಿತಿಯಲ್ಲಿ ವೈದ್ಯಕೀಯ ಕ್ಷೇತ್ರ ಹೊರತುಪಡಿಸಿ ಇತರ ಕ್ಷೇತ್ರಗಳ ಗಣ್ಯರನ್ನು ಸೇರಿಸಿರುವುದಕ್ಕೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು.
‘ಸುಪ್ರೀಂಕೋರ್ಟ್ ಮಾರ್ಗಸೂಚಿಯಂತೆ ತಜ್ಞರ ಸಮಿತಿ ರಚನೆ ಆಗಿಲ್ಲ. ಕೋವಿಡ್ 19 ನಿರ್ವಹಣೆ ವಿಚಾರದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ಸರಕಾರ ಕೇವಲ ಮೊಸಳೆ ಕಣ್ಣೀರು ಹಾಕುತ್ತಿರುವಂತಿದೆ. ಸರಕಾರ ನಿದ್ರೆ ಮಂಪರಿನಿಂದ ಎಚ್ಚೆತ್ತುಕೊಳ್ಳುತ್ತದೆ ಎಂದು ಕೋರ್ಟ್ ಭಾವಿಸಿದೆ. ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ನಾವೇ (ಕೋರ್ಟ್) ಗಂಭೀರವಾಗಿ ಪರಿಗಣಿಸಿ ಸ್ವತಂತ್ರ ತಜ್ಞರ ಸಮಿತಿ ರಚನೆಗೆ ಆದೇಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.
ರಾಜ್ಯ ಮಟ್ಟದ ತಜ್ಞರ ಸಮಿತಿ
ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ| ಸಿ.ಎನ್. ಮಂಜುನಾಥ್ ಅಧ್ಯಕ್ಷತೆಯಲ್ಲಿ ವೈದ್ಯಕೀಯ ಕ್ಷೇತ್ರದ ತಜ್ಞರನ್ನೊಳಗೊಂಡ 11 ಮಂದಿ ಸದಸ್ಯರ ರಾಜ್ಯ ಮಟ್ಟದ ತಜ್ಞರ ಸಮಿತಿ ರಚಿಸಲಾಗಿದೆ ಎಂದು ಸರಕಾರವು ಹೈಕೋರ್ಟ್‌ಗೆ ಇದೇ ಸಂದರ್ಭದಲ್ಲಿ ತಿಳಿಸಿತು.