ಬೆಂಗಳೂರು: ರಾಜ್ಯದ ಸರಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆಯನ್ನು ನೀಗಿಸುವ ವಿಚಾರದಲ್ಲಿ ರಾಜ್ಯ ಸರಕಾರವನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಶಿಕ್ಷಣ ಕೇವಲ ಸವಲತ್ತುಗಳಿದ್ದವರು, ಸ್ಥಿತಿವಂತರಿಗಷ್ಟೇ ಸೀಮಿತವೇ? ಬಡವರು, ದುರ್ಬಲರು, ಸವಲತ್ತುಗಳಿಲ್ಲದವರು ರಾಜ್ಯದಲ್ಲಿ ಶಿಕ್ಷಣ ಪಡೆಯುವಂತಿಲ್ಲವೇ? ಎರಡು ಹೊತ್ತಿನ ಊಟಕ್ಕೆ ಪರದಾಡುವ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ತುತ್ತಿನೊಂದಿಗೆ ರಾಜಿ ಮಾಡಿಕೊಳ್ಳಬೇಕಾಗಿದೆ ಎಂದು ಚಾಟಿ ಬೀಸಿದೆ.
ಶ್ರೀಮಂತರು ತಮ್ಮ ಮಕ್ಕಳನ್ನು ಹಣ ಕೊಟ್ಟು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ; ಬಡವರು, ಸವಲತ್ತುಗಳಿಲ್ಲದವರು ವಿಧಿಯಿಲ್ಲದೆ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಬೇಕಾಗುತ್ತದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಶೌಚಾಲಯ ಇಲ್ಲ, ಕುಡಿಯಲು ನೀರಿಲ್ಲ. ಇದರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ ಎಂದರೆ ಇದು ಸಮಾಜದಲ್ಲಿ “ಬಡವರು-ಬಲ್ಲಿದರ’ ವ್ಯವಸ್ಥೆ ನಿರ್ಮಾಣ ಮಾಡುತ್ತದೆ. ಸರಕಾರದ ಈ ಧೋರಣೆ ಖಾಸಗಿ ಶಾಲೆಗಳಿಗೆ ಮನ್ನಣೆ ಕೊಟ್ಟಂತಾಗಲಿದೆ ಎಂದು ಹೈಕೋರ್ಟ್ ತೀಕ್ಷ್ಣವಾಗಿ ಹೇಳಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧರಿಸಿ 2013ರಲ್ಲಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ| ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಈ ವೇಳೆ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಸರಕಾರಿ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳ ಸ್ಥಿತಿಗತಿ ಬಗ್ಗೆ 8 ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಅಂತಿಮ ಗಡುವು ನೀಡಿ ವಿಚಾರಣೆ ಮುಂದೂಡಿತು. ಪ್ರಕರಣದಲ್ಲಿ ಹೈಕೋರ್ಟ್‌ಗೆ ಅಮಿಕಸ್ ಕ್ಯೂರಿ ಆಗಿ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಸಹಕಾರ ನೀಡುತ್ತಿದ್ದಾರೆ.
ಇದಕ್ಕೆ ಮೊದಲು ವಿಚಾರಣೆಯ ವೇಳೆ, ರಾಜ್ಯದಲ್ಲಿ 464 ಶಾಲೆಗಳಲ್ಲಿ ಶೌಚಾಲಯಗಳಲ್ಲಿ, 87 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬ ಅಂಶವನ್ನು ಗಮನಿಸಿದ ನ್ಯಾಯಪೀಠ, ಇದು ನಿಜಕ್ಕೂ ಅಚ್ಚರಿ ತರಿಸುತ್ತದೆ. ಮಕ್ಕಳು ಓದುವ ಶಾಲೆಗಳಿಗೆ ಕನಿಷ್ಠ ಮೂಲಸೌಕರ್ಯಗಳು ಬೇಕು ಎಂಬ ವಿಚಾರ ಶಿಕ್ಷಣ ಇಲಾಖೆಗೆ ಇದೇ ಮೊದಲ ಬಾರಿಗೆ ಗೊತ್ತಾಗಿದೆಯೇ? ಮೂಲಸೌಕರ್ಯಗಳನ್ನು ಒದಗಿಸುವುದು ತನ್ನ ಜವಾಬ್ದಾರಿ ಎಂದು ಇಲಾಖೆಗೆ ಗೊತ್ತಿಲ್ಲವೇ? ಸರಕಾರಿ ಶಾಲೆಗಳಲ್ಲಿ ಬಡವರು, ಸವಲತ್ತುಗಳಿಲ್ಲದವರ ಮಕ್ಕಳ ಬರುತ್ತಾರೆ ಎಂದು ಹೇಳಲು ದೊಡ್ಡ ಸಂಶೋಧನೆ ಬೇಕಿಲ್ಲ. 2013ರಿಂದ ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಮಕ್ಕಳ ಹಿತದೃಷ್ಟಿಯಿಂದ ನ್ಯಾಯಾಲಯ ಹತ್ತು-ಹಲವು ಆದೇಶಗಳನ್ನು ನೀಡಿದೆ. ಅವುಗಳನ್ನು ಯಾರೂ ನೋಡಿಲ್ಲವೇ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಬಡವರಿಗೆ ಇರಲಿ ಮೂಲ ಸೌಕರ್ಯ
ಸರಕಾರ ಉಚಿತ ಬಸ್ ಪ್ರಯಾಣ ಸಹಿತ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿದರೂ ನಮಗೆ (ಹೈಕೋರ್ಟ್) ಅಭ್ಯಂತರವಿಲ್ಲ. ಬಡ ಮಕ್ಕಳ ಶಿಕ್ಷಣಕ್ಕೆ ಅಗತ್ಯ ಮೂಲ ಸೌಲಭ್ಯಗಳುಳ್ಳ ವ್ಯವಸ್ಥೆ ಕಲ್ಪಿಸಬೇಕು ಎಂಬುದೇ ನಮ್ಮ ಆಶಯ. ಪ್ರಾಥಮಿಕ ಶಿಕ್ಷಣವನ್ನು ಸಂವಿಧಾನದಲ್ಲಿ ಮೂಲಭೂತ ಹಕ್ಕನ್ನಾಗಿ ಮಾಡಲಾಗಿದೆ. ಕೈಯಲ್ಲಿ ಪುಸ್ತಕವಿಲ್ಲದ ಅಂಬೇಡ್ಕರ್ ಅವರ ಭಾವಚಿತ್ರ, ಪ್ರತಿಮೆ ನೋಡಲು ಸಾಧ್ಯವಿಲ್ಲ. ಅದು ಶಿಕ್ಷಣದ ಮಹತ್ವನ್ನು ಸಾರುತ್ತದೆ. ಆದರೆ ಸರಕಾರಗಳು ಸರಕಾರಿ ಶಾಲೆಗಳಲ್ಲಿ ಈ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಮುಂದಾಗಿಲ್ಲ. ಇದು ಪರೋಕ್ಷವಾಗಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ತಳ್ಳುವಂತೆ ಮಾಡುತ್ತಿದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.